ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಶಾಸಕ ಬಾಬಾಸಾಹೇಬ ಪಾಟೀಲ ಅವರು ೫೪ನೇ ಹುಟ್ಟು ಹಬ್ಬದ ಕಾರ್ಯಕ್ರಮ ಸಹಸ್ರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ನಡುವೆ ವಿಜೃಂಭಣೆಯಿಂದ ಬುಧವಾರ ನಡೆಯಿತು. ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಬಳಿ ಇರುವ ಶ್ರೀ ರಂಭಾಪೂರಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಗಣ್ಯರು, ಅಭಿಮಾನಿಗಳು ಹಾಗೂ ಕಾರ್ಯಕರ್ತರ ಶುಭಾಷಯಗಳ ಮಾಹಾಪೂರವೇ ಹರಿದು ಬಂದಿತು.ಮಳೆಯನ್ನು ಲೆಕ್ಕಿಸದೇ ನೆಚ್ಚಿನ ನಾಯಕನ ಹುಟ್ಟುಹಬ್ಬಕ್ಕೆ ಸಾಕ್ಷಿಯಾದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದಲ್ಲದೆ ಎಲ್ಲರಿಗೂ ಸಂಗೀತದ ರಸದೌತಣ ಬಡಿಸಲಾಯಿತು. ಮಂಟಪದಲ್ಲಿ ಬೆಲಗ್ಗೆ ೮ ರಿಂದ ರಕ್ತದಾನ ಶಿಬಿರವನ್ನು ಕಾರ್ಯಕರ್ತರು ಆಯೋಜಿಸಿದ್ದರು. ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ದೇಶಿ ಉಡುಪಿನಲ್ಲಿ ಕಂಗೊಳಿಸಿದ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ನಾನಾಸಾಹೇಬ ಪಾಟೀಲ ಸಹೋದರರಿಬ್ಬರು ಬಂದಂತಹ ಅಭಿಮಾನಿಗಳಿಂದ ಹೂಗುಚ್ಚ ಸ್ವೀಕರಿಸಿ ಆನಂದಿಸಿದರು. ಎಲ್ಲಡೆಯಿಂದಲೂ ತಂಡೋಪ ತಂಡವಾಗಿ ಆಗಮಿಸಿದ ಜನತೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಅಲ್ಲಿ ಮಾಡಲಾಗಿತ್ತು. ಬುಧವಾರ ಬೆಳಗ್ಗೆ ಇದಕ್ಕೂ ಮೊದಲು ಸ್ವಗ್ರಾಮವಾದ ನೇಗಿನಹಾಳ ಗ್ರಾಮದಲ್ಲಿ ೨ ಬಸ್ ನಿಲ್ದಾಣವನ್ನು ಉದ್ಘಾಟಿಸಿದ ಶಾಸಕರು ಅಲ್ಲಿಂದ ನೇರವಾಗಿ ಕಿತ್ತೂರು ಪಟ್ಟಣಕ್ಕೆ ಆಗಮಿಸಿದರು. ನಂತರ ತಾಯಿ ಚನ್ನಮ್ಮಾಜಿಗೆ ಹಾಗೂ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರು ಬಾಳಪ್ಪರ ಮೂರ್ತಿಗೆ ಗೌರವ ಸಲ್ಲಿಸಿದರು. ನಂತರ ಸೋಮವಾರ ಪೇಟೆಯ ಚನ್ನಮ್ಮಾಜಿಯ ಪುತ್ತಳಿಗೂ ಗೌರವ ಸಲ್ಲಿಸಿದರು.ಕೋಟೆಯ ಆವರಣದಲ್ಲಿರುವ ಗ್ರಾಮದೇವತೆಗೆ ಹಾಗೂ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಂತರ ತುಂಬುಗೇರಿ ಕೆರೆಗೆ ಭೇಟಿ ನೀಡಿದ ಶಾಸಕ ಬಾಬಾಸಾಹೇಬ ಪಾಟೀಲ ಅಲ್ಲಿಯ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ಹುಟ್ಟು ಹಬ್ಬದ ಸವಿನೆನಪಿಗಾಗಿ ಸಸಿ ನೆಟ್ಟು ಮುನ್ನಡೆದಿದ್ದು ವಿಶೇಷವಾಗಿತ್ತು.ಹುಟ್ಟು ಹಬ್ಬದ ದಿನದಂದು ಆಗಮಿಸಿದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಶಾಸಕರಿಗೆ ಸಚಿವ ಸ್ಥಾನ ದೊರೆಯುವ ವಿಶ್ವಾಸ ವ್ಯಕ್ತ ಪಡಿಸಿದ್ದಲ್ಲದೆ ಮುಂದಿನ ದಿನಗಳಲ್ಲಿ ಸಚಿವರಾಗುವಂತೆ ಶುಭಹಾರೈಸಿದ್ದು ಸಾಮಾನ್ಯವಾಗಿತ್ತು. ಇನ್ನೂಳಿದಂತೆ ಕ್ಷೇತ್ರದೆಲ್ಲೆಡೆಯೂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶಾಲಾ ಕಾಲೇಜಿನ ಮಕ್ಕಳಿಗೆ ಪೆನ್ನು ಪುಸ್ತಕಗಳನ್ನು ವಿತರಿಸಿದರು. ಈ ಅರ್ಥಪೂರ್ಣವಾದ ಹುಟ್ಟು ಹಬ್ಬದ ಆಚರಣೆಗೆ ಶಾಸಕ ಪಾಟೀಲ ಅವರ ಪತ್ನಿ ರೋಹಿಣಿತಾಯಿ ಪಾಟೀಲ ಹಾಗೂ ಮಕ್ಕಳು ಸಹ ಸಾಥ್ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸುವ ಕ್ಷೇತ್ರದ ಜನರಿಗೆ ಹಾಗೂ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಊಟೋಪಚಾರ ಜೊತೆಗೆ ಪ್ರೀತಿ ವಿಶ್ವಾಸ ಹಾಗೂ ಭಾಂದವ್ಯದ ಬೆಸುಗೆ ಬೆಸೆದಿದ್ದು ಎಲ್ಲರಲ್ಲಿಯೂ ಸಂತೃಪ್ತಿ ತಂದಿತು.ಶ್ರೀಗಳ ಆಶೀರ್ವಾದ ಪಡೆದ ಶಾಸಕ:ಹುಟ್ಟು ಹಬ್ಬದ ಹಿಂದಿನ ದಿನ ಶಾಸಕ ಬಾಬಾಸಾಹೇಬ ಪಾಟೀಲ ಕ್ಷೇತ್ರದ ವಿವಿಧ ಮಠಾಧೀಶರಿಗೆ ಹಾಗೂ ದೇವಸ್ಥಾನಗಳಿಗೆ ಭೇಟಿಯಾಗಿ ಆರ್ಶಿವಾದ ಪಡೆದರು. ಬೈಲಹೊಂಗಲ, ನೇಗಿನಹಾಳ, ಕಿತ್ತೂರು, ನಿಚ್ಚಣಕಿ ಮಠಗಳಿಗೆ ಭೇಟಿ ನೀಡಿದ ಶಾಸಕ ಪಾಟೀಲ, ಎಲ್ಲ ಸ್ವಾಮೀಜಿಗಳಿಂದಲೂ ಆಶೀರ್ವಾದ ಪಡೆದು ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.