ಸಾರಾಂಶ
ನಾಡ ಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಜತೆ ದಲಿತರಿಗೂ ಅವಕಾಶವಿಲ್ಲ ಎಂಬ ಸ್ವಯಂ ಘೋಷಿತ ಹಿಂದೂ ಮುಖಂಡ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಅತ್ಯಂತ ಬಾಲಿಶವಾಗಿದೆ. ಯತ್ನಾಳ್ ಹೇಳಿಕೆ ದಲಿತರಿಗೆ ಅವಮಾನವಾಗಿದ್ದು, ಈ ನಿಟ್ಟಿನಲ್ಲಿ ಯತ್ನಾಳ್ ಅವರಿಗೆ ಕಪ್ಪುಬಾವುಟ ಪ್ರದರ್ಶನದ ಜತೆಗೆ ಮುತ್ತಿಗೆ ಹಾಕಿ ಖಂಡಿಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾ.ಸಂಚಾಲಕ ಜಗದೀಶ್ ಚುರ್ಚುಗುಂಡಿ ತಿಳಿಸಿದರು.
ಶಿಕಾರಿಪುರ: ನಾಡ ಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಜತೆ ದಲಿತರಿಗೂ ಅವಕಾಶವಿಲ್ಲ ಎಂಬ ಸ್ವಯಂ ಘೋಷಿತ ಹಿಂದೂ ಮುಖಂಡ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಅತ್ಯಂತ ಬಾಲಿಶವಾಗಿದೆ. ಯತ್ನಾಳ್ ಹೇಳಿಕೆ ದಲಿತರಿಗೆ ಅವಮಾನವಾಗಿದ್ದು, ಈ ನಿಟ್ಟಿನಲ್ಲಿ ಯತ್ನಾಳ್ ಅವರಿಗೆ ಕಪ್ಪುಬಾವುಟ ಪ್ರದರ್ಶನದ ಜತೆಗೆ ಮುತ್ತಿಗೆ ಹಾಕಿ ಖಂಡಿಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾ.ಸಂಚಾಲಕ ಜಗದೀಶ್ ಚುರ್ಚುಗುಂಡಿ ತಿಳಿಸಿದರು.
ಗುರುವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಡಿನ ಸಮಸ್ತ ಜನತೆಯ ಪ್ರತೀಕವಾಗಿರುವ ನಾಡ ಹಬ್ಬ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಕೆಲ ಮನು ಧೋರಣೆಯ ವ್ಯಕ್ತಿ, ಸಂಘಗಳು ತೀವ್ರವಾಗಿ ವಿರೋಧಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಸಂವಿಧಾನದಲ್ಲಿ ಸರ್ವ ಧರ್ಮಗಳಿಗೆ ಸಮಾನವಾದ ಹಕ್ಕು ನೀಡಲಾಗಿದ್ದು, ಈ ದಿಸೆಯಲ್ಲಿ ಜಾತ್ಯಾತೀತ ದೇಶ ಎಂದು ಗುರುತಿಸಿಕೊಂಡಿದೆ ಎಂದು ತಿಳಿಸಿದರು. ಸಂವಿಧಾನದ ಸೂಕ್ತ ಅರಿವಿಲ್ಲದ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾಮಾಜಿಕ ಜಾಲತಾಣದಲ್ಲಿ ನಾಡ ಹಬ್ಬ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಜತೆ ದಲಿತರು ಅರ್ಹರಲ್ಲ ಕೇವಲ ಸನಾತನಿಗಳಿಗೆ ಮಾತ್ರ ಅರ್ಹತೆ ಇದೆ ಎಂದು ಉಡಾಫೆಯಾಗಿ ನಾಲಗೆ ಹರಿಬಿಟ್ಟಿದ್ದು ಯತ್ನಾಳ್ ರ ಉದ್ಧಟತನದ ವರ್ತನೆ ದಲಿತ ಸಮುದಾಯಕ್ಕೆ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುವ ಯತ್ನಾಳ್ ರವರು 101ಕ್ಕೂ ಅಧಿಕ ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗದ ಜನತೆಯನ್ನು ಹಿಂದೂ ಧರ್ಮೀಯರು ಎಂದು ಪರಿಗಣಿಸಿಲ್ಲವೇ ? ಎಂದು ಪ್ರಶ್ನಿಸಿದರು.
ಹಾಸನದಲ್ಲಿ ಗಣಪತಿ ವಿಸರ್ಜನೆ ವೇಳೆ ಅಪಘಾತದಲ್ಲಿ ಮೃತಪಟ್ಟ ಹಲವರು ದಲಿತರಾಗಿದ್ದು ಈ ಹಿನ್ನೆಲೆಯಲ್ಲಿ ಹಿಂದೂಪರ ಹೋರಾಟಗಾರರು ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಲಿಲ್ಲ ಕನಿಷ್ಠ ಸೌಜನ್ಯಕ್ಕೆ ಶೋಕ ವ್ಯಕ್ತಪಡಿಸದಿರುವ ಹಿಂದೂ ಧರ್ಮವನ್ನು ಒಪ್ಪಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ ಅವರು ಯತ್ನಾಳ್ ರ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಕಪ್ಪುಬಾವುಟ ಪ್ರದರ್ಶಿಸುವ ಜತೆಗೆ ಸಾರ್ವಜನಿಕ ಸಭೆಯಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ತಾ.ಆದಿ ಜಾಂಬವ ಮಾತಂಗ ಸಮಾಜದ ಅಧ್ಯಕ್ಷ, ನ್ಯಾಯವಾದಿ ಎನ್ ನಿಂಗಪ್ಪ, ಡಿಎಸ್ ಎಸ್ ತಾ.ಸಂಚಾಲಕ ಹನುಮಂತಪ್ಪ, ಸಂ.ಸಂಚಾಲಕ ಈಸೂರು ಪರಮೇಶ್, ಮಂಜು ಸುರಗೀಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.