ಕನ್ನಡಪ್ರಭ ವಾರ್ತೆ ಸಾಗರ

ಪಟ್ಟಣದ ಕೆಳದಿ ರಸ್ತೆ ರೈಲ್ವೆ ಅಂಡರ್‌ ಬ್ರಿಡ್ಜ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಂಡರ್‌ ಬ್ರಿಡ್ಜ್ ಬದಲು ಓವರ್ ಬ್ರಿಡ್ಜ್ ನಿರ್ಮಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕೆಳದಿ ರಸ್ತೆಯಲ್ಲಿ ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿಗೆ ಸ್ಥಳ ಪರಿಶೀಲನೆಗೆ ಬಂದಿದ್ದ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾತನಾಡಿದ ಅವರು, ಅಂಡರ್ ಬ್ರಿಡ್ಜ್ ಕಾಮಗಾರಿಯನ್ನು ಕೈಬಿಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಒಂದು ವರ್ಷದ ಹಿಂದೆ ರೈಲ್ವೆ ಇಲಾಖೆಗೆ ಕೆಳದಿ ರಸ್ತೆ ಸೇರಿ ಮೂರು ಕಡೆ ಓವರ್ ಬ್ರಿಡ್ಜ್ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಲು ಮನವಿ ಮಾಡಲಾಗಿತ್ತು. ಇದೀಗ ಕೆಳದಿ ರಸ್ತೆಯ ರೈಲ್ವೆ ಗೇಟ್‌ಗೆ ಅಂಡರ್ ಬ್ರಿಡ್ಜ್ ನಿರ್ಮಿಸಲು ೪೧.೫೦ ಕೋಟಿ ರು. ಮಂಜೂರಾಗಿದೆ. ಆದರೆ ಪಕ್ಕದಲ್ಲಿಯೇ ವರದಾನದಿ ಹರಿಯುತ್ತಿದ್ದು, ಅಂಡರ್ ಬ್ರಿಡ್ಜ್ ನಿರ್ಮಿಸುವುದರಿಂದ ಮಳೆಗಾಲದಲ್ಲಿ ನೀರು ಅಂಡರ್ ಬ್ರಿಡ್ಜ್ ಒಳಗೆ ನಿಲ್ಲುವ ಸಾಧ್ಯತೆ ಇದೆ. ಈಗಾಗಲೇ ಅಡ್ಡೇರಿ ಇನ್ನಿತರೆ ಕಡೆ ಅಂಡರ್ ಬ್ರಿಡ್ಜ್ ನಿರ್ಮಿಸಿದಲ್ಲಿ ಈ ಸಮಸ್ಯೆ ಎದುರಾಗಿದೆ. ನಗರ ಮಧ್ಯದಲ್ಲಿ ಇಂತಹ ಸಮಸ್ಯೆ ಉಂಟಾಗಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.

ಸಾಗರ ಸೊರಬಕ್ಕೆ ಹೋಗುವ ಪ್ರಮುಖ ರಸ್ತೆ ಇದಾಗಿದ್ದು, ಇಲ್ಲಿ ಓವರ್ ಬ್ರಿಡ್ಜ್ ಅಗತ್ಯವಾಗಿದೆ. ಈ ಕುರಿತು ರೈಲ್ವೆ ಸಚಿವ ವಿ.ಸೋಮಣ್ಣ ಹಾಗೂ ಸಂಸದರಿಗೆ ಪತ್ರ ಬರೆಯಲಾಗುತ್ತದೆ. ಈಗಾಗಲೆ ರೈಲ್ವೆ ಸಚಿವರಿಗೆ ಸಾಗರದ ಕೆಲವು ರೈಲ್ವೆ ಯೋಜನೆ ಕುರಿತು ಪತ್ರ ಬರೆಯಲಾಗಿದ್ದು, ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅವರು ಮೌಖಿಕ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.


ಐ.ಎನ್.ಸುರೇಶಬಾಬು, ಗಣಪತಿ ಮಂಡಗಳಲೆ, ಡಿ.ದಿನೇಶ್, ಮಂಜುನಾಥ್, ರೈಲ್ವೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.