ಕಳೆದ ಆಗಸ್ಟ್ ನಲ್ಲಿ ಮಾಡಲ್ ಹೌಸ್ನ ಗೇಟ್ಗಳನ್ನು ಮುರಿದು ಕೆಲವು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು.
ಬಳ್ಳಾರಿ: ನಗರ ಹೊರವಲಯದ ಜಿ-ಸ್ಕ್ವೇರ್ ಲೇಔಟ್ ನ ಮಾಡಲ್ ಹೌಸ್ ಬೆಂಕಿ ಹಚ್ಚಿದ ಕೃತ್ಯದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಕೈವಾಡವಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ರೀಲ್ಸ್ ಮಾಡುವ ಹುಡುಗರು ಕೃತ್ಯ ಎಸಗಿದ್ದಾರೆ. ಮಾಡಲ್ ಹೌಸ್ ಪಾಳು ಬಿದ್ದಿತ್ತು. ಯಾವುದೇ ಸೆಕ್ಯೂರಿಟಿ ಇರಲಿಲ್ಲ ಎಂದು ಎಸ್ಪಿಯವರು ತಿಳಿಸಿದ್ದಾರೆ. ಮಾಡಲ್ ಹೌಸ್ಗೆ ನಾವು ಸೆಕ್ಯೂರಿಟಿ ನಿಯೋಜಿಸಿದ್ದೇವೆ. ರೀಲ್ಸ್ ಮಾಡುವ ಹುಡುಗರು ಈ ಕೃತ್ಯ ಎಸಗಿದ್ದಾರೆ ಎಂದರೆ ನಂಬುವುದು ಹೇಗೆ ಸಾಧ್ಯ? ರೀಲ್ಸ್ ಮಾಡುವವರು ಬೆಂಕಿಯನ್ನು ಏಕೆ ಹಚ್ಚುತ್ತಾರೆ? ಎಂದು ಪ್ರಶ್ನಿಸಿದರು.ಕಳೆದ ಆಗಸ್ಟ್ ನಲ್ಲಿ ಮಾಡಲ್ ಹೌಸ್ನ ಗೇಟ್ಗಳನ್ನು ಮುರಿದು ಕೆಲವು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ನಾವು ದೂರು ಸಹ ದಾಖಲು ಮಾಡಿದ್ದೆವು. ಗ್ರಾಮೀಣ ಸಿಪಿಐ ಆಗಿದ್ದ ಸತೀಶ್ ಅವರು ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಎಎಸ್ಪಿ ರವಿಕುಮಾರ್ ಅವರು ಸಿಪಿಐ ಸತೀಶ್ ಅವರಿಗೆ ಯುವಕರನ್ನು ಬಂಧಿಸದಂತೆ ಒತ್ತಡ ತಂದರು. ದುಷ್ಕರ್ಮಿಗಳನ್ನು ಈ ಇಬ್ಬರೇ ರಕ್ಷಣೆ ಮಾಡಿದರು ಎಂದು ಆರೋಪಿಸಿದರು.
ಜಿ-ಸ್ಕ್ವೇರ್ ಲೇಔಟ್ ಮೇಲೆ ಶಾಸಕ ಭರತ್ ರೆಡ್ಡಿ ಕಣ್ಣಾಯಿಸಿದ್ದಾರೆ. ಕಳೆದ ಆರು ತಿಂಗಳ ಹಿಂದೆಯೇ ಮಾಡಲ್ ಹೌಸ್ನ ಕಳ್ಳತನ ನಡೆದರೂ ದುಷ್ಕರ್ಮಿಗಳನ್ನು ಶಾಸಕ ಭರತ್ ರೆಡ್ಡಿ ರಕ್ಷಣೆ ಮಾಡಿದ್ದಾರೆ. ಶುಕ್ರವಾರ ರಾತ್ರಿ ಜರುಗಿದ ಬೆಂಕಿ ಹಚ್ಚಿದ ಪ್ರಕರಣಕ್ಕೆ ಭರತ್ ರೆಡ್ಡಿಯ ಹುನ್ನಾರವಿದೆ ಎಂದರಲ್ಲದೆ, ಪ್ರಕರಣದ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಎಸ್ಪಿ ರವಿಕುಮಾರ್ ಅವರನ್ನು ಕಳಿಸಿದ್ದು ಎಷ್ಟು ಸರಿ? ಆತನಿಂದ ಅದ್ಯಾವ ನ್ಯಾಯ ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದರು.ಬ್ಯಾನರ್ ಗಲಭೆ ಪ್ರಕರಣದಲ್ಲಿ ಈವರೆಗೆ ಆರೋಪಿಗಳಾದ ಶಾಸಕ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿಯನ್ನು ಬಂಧಿಸಲಾಗಿಲ್ಲ. ಶಾಸಕನನ್ನು ರಕ್ಷಣೆ ಮಾಡಿಕೊಳ್ಳಲು ಸಿಎಂ ಪ್ರಯತ್ನಿಸುತ್ತಿದ್ದಾರೆಯೇ ವಿನಃ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಯಾವ ಕಾಳಜಿಯನ್ನು ಸಿಎಂ ತೆಗೆದುಕೊಂಡಿಲ್ಲ. ಸಿಎಂ ಸಿದ್ಧರಾಮಯ್ಯ ನಿಜಕ್ಕೂ ಪ್ರಾಮಾಣಿಕ ರಾಜಕಾರಣಿಯಾಗಿದ್ದರೆ ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.
ಶಾಸಕ ಭರತ್ ರೆಡ್ಡಿಯಂತಹ ಕ್ರಿಮಿನಲ್ಗಳನ್ನು ಸಿಎಂ ರಕ್ಷಣೆ ಮಾಡುತ್ತಿದ್ದಾರೆ. ಈ ಕ್ರಿಮಿನಲ್ ಮುಂದೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾನೆ. ವಾರ್ಡ್ ಗಳಲ್ಲಿ ಕ್ರಿಮಿನಲ್ ಗಳನ್ನು ತಯಾರು ಮಾಡುತ್ತಿದ್ದಾನೆ ಎಂದು ಶಾಸಕ ಜನಾರ್ದನ ರೆಡ್ಡಿ ದೂರಿದರು. ಮಾಜಿ ಸಚಿವ ಶ್ರೀರಾಮುಲು, ಜಿ.ಸೋಮಶೇಖರ ರೆಡ್ಡಿ ಇದ್ದರು.