ಕನ್ನಡಪ್ರಭ ವಾರ್ತೆ ಶಿರಸಿ
ನಾಡಿನ ಸುಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆ ಶಾಸಕ ಭೀಮಣ್ಣ ಟಿ. ನಾಯ್ಕ ಸೋಮವಾರ ನಗರದ ವಿವಿಧೆಡೆ ಭೇಟಿ ನೀಡಿ ಸಿದ್ಧತಾ ಕ್ರಮಗಳ ಕುರಿತು ಖದ್ದಾಗಿ ವೀಕ್ಷಣೆ ಮಾಡಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.ನಗರದ ಬಿಡಕಿಬೈಲ್‌ನಲ್ಲಿರುವ ಮರಿ ಚಪ್ಪರದ ಬಳಿಗೆ ತೆರಳಿದ ಶಾಸಕರು, ಅಲ್ಲಿ ನಡೆಯುತ್ತಿರುವ ಕಾಮಗಾರಿ ಹಾಗೂ ಜಾತ್ರಾ ಸಿದ್ಧತೆ ವೀಕ್ಷಿಸಿದರು. ಭಕ್ತಾದಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಕುಡಿಯುವ ನೀರು, ಸ್ವಚ್ಛತೆ ಮತ್ತು ಶೌಚಾಲಯ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಲದೇ ಜಾತ್ರೆಯ ಅವಧಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಹಾಗೂ ಭದ್ರತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗಿದೆ. ಮಾರಿಕಾಂಬಾ ಜಾತ್ರೆಯು ನಮ್ಮ ಹೆಮ್ಮೆ. ಈ ಸಂಭ್ರಮವು ಶಾಂತಿಯುತವಾಗಿ ಮತ್ತು ವ್ಯವಸ್ಥಿತವಾಗಿ ನಡೆಯಲು ಪ್ರತಿಯೊಬ್ಬ ನಾಗರಿಕರು ಹಾಗೂ ಭಕ್ತರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.ಈ ಸಂದರ್ಭ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು, ಜಾತ್ರಾ ಸಮಿತಿಯ ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.ನಾಳೆ ಸಾರಿಕಾ ಸೇವಾ ಟ್ರಸ್ಟ್‌ನಿಂದ ಅನ್ನಸಂತರ್ಪಣೆ
ಫೆ.25ರಂದು ಸಾರಿಕಾ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸಕಲ ಭಕ್ತಾಧಿಗಳಿಗೆ ಬುಧವಾರ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.ಶಿರಸಿಯ ಸಾರಿಕಾ ಸೇವಾ ಟ್ರಸ್ಟ್ ಹಲವು ವರ್ಷಗಳಿಂದ ನಿಸ್ವಾರ್ಥವಾಗಿ ಸಾಮಾಜಿಕ, ಧಾರ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ನೀಡುತ್ತಾ ಬಂದಿರುತ್ತದೆ. ಹಾಗೆ ಕಳೆದ ಕೆಲವು ವರ್ಷಗಳಿಂದ ನಮ್ಮ ಹೆಮ್ಮೆಯ ಶಿರಸಿಯ ಮಾರಿಕಾಂಬಾ ಜಾತ್ರೆಯ ಮೊದಲ ದಿನ ಅಂದರೆ ರಥೋತ್ಸವದ ದಿನದಂದು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.ಅದರಂತೆ ಈ ವರ್ಷವೂ ಫೆ. 25ರಂದು ಹುಬ್ಬಳ್ಳಿ ರಸ್ತೆಯ ರೋಷನ್ ರಿಕಂಡಿಷನ್ ವರ್ಕ್ಸ್‌ನ ಆವರಣದಲ್ಲಿ ಶ್ರೀ ಮಾರಿಕಾಂಬೆಯ ಭಕ್ತರಿಗೋಸ್ಕರ ಮಹಾಅನ್ನಪ್ರಸಾದ ಸೇವೆ ಆಯೋಜಿಸಿದ್ದು ಪ್ರತಿಯೊಬ್ಬ ಭಕ್ತರು ಪ್ರಸಾದ ಸ್ವೀಕರಿಸಬೇಕೆಂದು ಭಕ್ತಾಧಿಗಳಲ್ಲಿ ಮನವಿ ಮಾಡುತ್ತೇವೆ ಎಂದು ಸಾರಿಕಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪಯ್ಯು ಚೌಟಿ ಹಾಗೂ ಸರ್ವ ಸದಸ್ಯರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.