ಉಚ್ಚಂಗಿ ಪ್ರದೇಶಕ್ಕೆ ತೆರಳಲು ಒಣಗೂರು ಮಾರ್ಗವಾಗಿ ಸುಮಾರು 7.5ರಿಂದ 8 ಕಿ.ಮೀ. ಸುತ್ತುವರಿದು ಪ್ರಯಾಣಿಸಬೇಕಿತ್ತು. ಸೇತುವೆ ನಿರ್ಮಾಣದಿಂದ ಈ ಅಂತರ 1.5ರಿಂದ 2 ಕಿ.ಮೀ.ಗೆ ಇಳಿಯಲಿದ್ದು, ಗ್ರಾಮಸ್ಥರು, ರೈತರು ಹಾಗೂ ವಾಹನ ಸವಾರರಿಗೆ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ. ಸೇತುವೆಯ ಎರಡೂ ಬದಿಗಳಲ್ಲಿ ಕ್ರಮವಾಗಿ 230 ಮೀಟರ್ ಹಾಗೂ 100 ಮೀಟರ್ ರಸ್ತೆ ನಿರ್ಮಾಣವೂ ಕೈಗೊಳ್ಳಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವ ಸಂದರ್ಭದಲ್ಲಿ ಎದುರಾಗುತ್ತಿದ್ದ ಸಂಚಾರ ಸಮಸ್ಯೆಗೆ ಪರಿಹಾರ ದೊರೆಯುವ ನಿರೀಕ್ಷೆಯಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಆಡ್ರಹಳ್ಳಿ- ಪಾಲಳ್ಳಿ ಗ್ರಾಮಗಳ ನಡುವಿನ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಹಲವು ದಶಕಗಳ ಗ್ರಾಮಸ್ಥರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ₹2.50 ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿ, ಈ ಭಾಗದ ಜನರು ಉಚ್ಚಂಗಿ ಪ್ರದೇಶಕ್ಕೆ ತೆರಳಲು ಒಣಗೂರು ಮಾರ್ಗವಾಗಿ ಸುಮಾರು 7.5ರಿಂದ 8 ಕಿ.ಮೀ. ಸುತ್ತುವರಿದು ಪ್ರಯಾಣಿಸಬೇಕಿತ್ತು. ಸೇತುವೆ ನಿರ್ಮಾಣದಿಂದ ಈ ಅಂತರ 1.5ರಿಂದ 2 ಕಿ.ಮೀ.ಗೆ ಇಳಿಯಲಿದ್ದು, ಗ್ರಾಮಸ್ಥರು, ರೈತರು ಹಾಗೂ ವಾಹನ ಸವಾರರಿಗೆ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ. ಸೇತುವೆಯ ಎರಡೂ ಬದಿಗಳಲ್ಲಿ ಕ್ರಮವಾಗಿ 230 ಮೀಟರ್ ಹಾಗೂ 100 ಮೀಟರ್ ರಸ್ತೆ ನಿರ್ಮಾಣವೂ ಕೈಗೊಳ್ಳಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವ ಸಂದರ್ಭದಲ್ಲಿ ಎದುರಾಗುತ್ತಿದ್ದ ಸಂಚಾರ ಸಮಸ್ಯೆಗೆ ಪರಿಹಾರ ದೊರೆಯುವ ನಿರೀಕ್ಷೆಯಿದೆ.ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಸೇತುವೆ ನಿರ್ಮಾಣ ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಅಗತ್ಯ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಗುತ್ತಿಗೆದಾರರು ಗುಣಮಟ್ಟಕ್ಕೆ ಆದ್ಯತೆ ನೀಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಮುಂದಿನ ಮಳೆಗಾಲದ ವೇಳೆಗೆ ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದರು.ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ರಸ್ತೆ ಹಾಗೂ ಸೇತುವೆ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ. ಕರಗೂರು ಚೌಡಿಬಾನೆ ರಸ್ತೆ, ಕರಗೂರು ಒಳರಸ್ತೆ ಹಾಗೂ ಉಚ್ಚಂಗಿ–ಕರಗೂರು ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಉಚ್ಚಂಗಿ-ಐಗೂರು-ಚಿಕ್ಕಂದೂರು ರಸ್ತೆಯನ್ನು ₹3 ಕೋಟಿ ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಿಸಲಾಗಿದೆ. ಹೆತ್ತೂರಿನಲ್ಲಿ ₹1.05 ಕೋಟಿ ವೆಚ್ಚದ ಕೆಇಬಿ ಶಾಖಾ ವಿತರಣಾ ಕಚೇರಿ ಕಟ್ಟಡ, ಹಳ್ಳಿಬೈಲು-ಹಳ್ಳಿಗದ್ದೆ ರಸ್ತೆ ಅಭಿವೃದ್ಧಿಗೆ ₹50 ಲಕ್ಷ, ಕೆಳಾ-ಮಲಗಡಿ ಸಂಪರ್ಕ ಕಾಮಗಾರಿಗೆ ₹40 ಲಕ್ಷ ಹಾಗೂ ಹನ್ನೆರಡುಗದ್ದೆ-ತಡವುನಾರೆ ಭಾಗದಲ್ಲಿ ₹20 ಲಕ್ಷ ವೆಚ್ಚದ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹಳ್ಳಿಯೂರು-ಹಾಡ್ಯ ಸೇತುವೆಗೆ ₹4.10 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.ಗ್ರಾಮದ ಹಿರಿಯರಾದ ಪುಟ್ಟೇಗೌಡ ಮಾತನಾಡಿ, ಆಡ್ರಹಳ್ಳಿ-ಪಾಲಳ್ಳಿ ನಡುವಿನ ಹೊಳೆಗೆ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ 40ರಿಂದ 50 ವರ್ಷಗಳಿಂದ ಇತ್ತು. ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವಾಗ ಜನರು ಜೀವದ ಹಂಗು ತೊರೆದು ದಾಟಬೇಕಾಗಿತ್ತು. ಈ ಹಿಂದೆ ಹೊಳೆ ದಾಟುವಾಗ ಕೆಲವರು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿವೆ. ಇದೀಗ ಬಹುದಿನಗಳ ಬೇಡಿಕೆ ಈಡೇರುತ್ತಿರುವುದು ಸಂತಸ ತಂದಿದೆ ಎಂದರು.ನಂದೀಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅಶೋಕ್ ಮಾತನಾಡಿ, ಸೇತುವೆ ನಿರ್ಮಾಣಕ್ಕೆ ಶಾಸಕರು ಆರಂಭದಿಂದಲೂ ಸಹಕಾರ ನೀಡಿದ್ದು, ಭೂಮಿಪೂಜೆ ನೆರವೇರಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆ. ಕಾಮಗಾರಿಯನ್ನು ಗುಣಮಟ್ಟದಿಂದ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ತೀರ್ಥಾನಂದ, ಪ್ರದೀಪ್ ಬಾಚಿಹಳ್ಳಿ, ಪ್ರತಾಪ್ ಹೆತ್ತೂರು, ವಾಲೆ ಮಂಜು, ಮಾಜಿ ಗ್ರಾಮ ಉಪಾಧ್ಯಕ್ಷೆ ಲೋಲಾಕ್ಷಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಳಿನಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ನಂದೀಶ್, ಯಸಳೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸವಿನ್ ಗೌಡ ಸೇರಿದಂತೆ ಗ್ರಾಮಸ್ಥರು ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.