ಸ್ಥಳೀಯರ ನಿರಂತರ ಬೇಡಿಕೆಯನ್ನು ಪರಿಗಣಿಸಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ಸಂಚಾರ ಆರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರು ಹಾಗೂ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ .
ಆಲೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಶಿಕ್ಷಕರು, ರೈತರು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಕೆ.ಹೊಸಕೋಟೆ ಭಾಗದ ವಿವಿಧ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಕೆ.ಹೊಸಕೋಟೆಯಲ್ಲಿ ನೂತನ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಡೂರು, ಕಿತ್ತಗೆರೆ, ಕಿತ್ತಗಳಲೆ, ಕೊಗಲವಾಡಿ ಹಾಗೂ ಆಲೆಬೇಲೂರು ಭಾಗಕ್ಕೆ ರಸ್ತೆ ಸಂಪರ್ಕವಿದ್ದರೂ ಬಸ್ ಸೌಲಭ್ಯ ಇಲ್ಲದ ಕಾರಣ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ವಿಶೇಷವಾಗಿ ವಿದ್ಯಾರ್ಥಿಗಳು ಮೂರರಿಂದ ಐದು ಕಿ.ಮೀ. ನಡೆದುಕೊಂಡು ಶಾಲೆಗೆ ತೆರಳಬೇಕಾಗಿತ್ತು ಎಂದರು. ಸ್ಥಳೀಯರ ನಿರಂತರ ಬೇಡಿಕೆಯನ್ನು ಪರಿಗಣಿಸಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ಸಂಚಾರ ಆರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರು ಹಾಗೂ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಈ ಭಾಗದ ಜನರ ಅನುಕೂಲಕ್ಕಾಗಿ ಕೊಡ್ಲಿಪೇಟೆ ಮಾರ್ಗವಾಗಿ ಬೆಂಗಳೂರಿಗೂ ನೇರ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಸಕಲೇಶಪುರ ಭಾಗಕ್ಕೆ ಈವರೆಗೆ ಸುಮಾರು ೧೫ ಹೊಸ ಬಸ್‌ಗಳು ಬಂದಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಇರುವ ಗ್ರಾಮೀಣ ಮಾರ್ಗಗಳಿಗೆ ಆದ್ಯತೆ ಮೇರೆಗೆ ಬಸ್ ಸೇವೆ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.