ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಕ್ರಮಗಳ ಬೋಧನೆಗೆ ಸೀಮಿತವಾಗದೆ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾದ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಮೂಲಕ ಅವರ ಆಲೋಚನಾ ಸಾಮರ್ಥ್ಯವನ್ನು ವೃದ್ಧಿಸಬೇಕಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ದೇಶದ ಭವಿಷ್ಯವನ್ನು ರೂಪಿಸುವ ಯುವಕ- ಯುವತಿಯರು ರಾಷ್ಟ್ರೀಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಮುನ್ನಡೆಯಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕಿನ ಹಾನುಬಾಳು ವಿನಾಯಕ ಎಜುಕೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿದ್ಯಾನಿಧಿ ಶಾಲೆಯ ವಾರ್ಷಿಕೋತ್ಸವ ‘ವಿದ್ಯಾನಿಧಿಯೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣವು ನಮ್ಮ ಬದುಕಿನ ಮೂಲಮಂತ್ರವಾಗಬೇಕು. ಯಾವ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವತ್ತ ವಿದ್ಯಾರ್ಥಿಗಳು ದೃಢಸಂಕಲ್ಪ ಹೊಂದಬೇಕು ಎಂದರು.
ಯುವಕರು ದುಶ್ಚಟಗಳಿಗೆ ದಾಸರಾಗದೆ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಸಹನೆ, ಸೌಹಾರ್ದತೆ, ಸಹಬಾಳ್ವೆ ಹಾಗೂ ಸಾಮಾಜಿಕ ಕಳಕಳಿಯನ್ನು ಜೀವನದಲ್ಲಿ ರೂಢಿಸಿಕೊಳ್ಳುವುದು ಅಗತ್ಯ ಎಂದು ಕಿವಿಮಾತು ಹೇಳಿದರು.ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಕ್ರಮಗಳ ಬೋಧನೆಗೆ ಸೀಮಿತವಾಗದೆ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾದ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಮೂಲಕ ಅವರ ಆಲೋಚನಾ ಸಾಮರ್ಥ್ಯವನ್ನು ವೃದ್ಧಿಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ನಿರ್ಣಾಯಕವಾಗಿದೆ. ಶಿಕ್ಷಣ, ತಂತ್ರಜ್ಞಾನ ಜ್ಞಾನ, ನೈತಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯ ಮೂಲಕ ಯುವಕರು ಬದಲಾವಣೆಯ ಹರಿಕಾರರಾಗಬಹುದು ಎಂದರು. ಯುವಜನಾಂಗ ದೇಶದ ಅತಿದೊಡ್ಡ ಶಕ್ತಿಯಾಗಿದ್ದು, ದೃಢಸಂಕಲ್ಪ ಹಾಗೂ ಪ್ರಾಮಾಣಿಕತೆಯಿಂದ ಭ್ರಷ್ಟಾಚಾರ ಮುಕ್ತ ಭಾರತದ ಕನಸನ್ನು ನನಸಾಗಿಸಬಹುದು ಎಂದು ಹೇಳಿದರು.