ಪ್ರಥಮ ಲಮಾಣಿ ಕುಟುಂಬದ ಜತೆ ನಾವು ಇರುತ್ತೇವೆ ಹಾಗೂ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಕೊಡಿಸುವ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಭರವಸೆ ನೀಡಿದರು.

ಲಕ್ಷ್ಮೇಶ್ವರ: ಸಮೀಪದ ದೊಡ್ಡೂರು ಗ್ರಾಮದ ಹತ್ತಿರ ಶಾಲಾ ಬಸ್ಸಿನಿಂದ ಬಿದ್ದು ಮೃತಪಟ್ಟ ಎಲ್‌ಕೆಜಿ ಓದುತ್ತಿದ್ದ ಬಾಲಕ ಪ್ರಥಮ ಅರುಣ ಲಮಾಣಿ ಅವರ ಮನೆಗೆ ಶಾಸಕ ಡಾ. ಚಂದ್ರು ಲಮಾಣಿ ಅವರು ಸೋಮವಾರ ಭೇಟಿ ನೀಡಿ ಆ ಕುಟಂಬದವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಅವರು, ಪ್ರಥಮನ ಸಾವು ವೈಯಕ್ತಿಕವಾಗಿ ಸಾಕಷ್ಟು ನೋವು ಉಂಟು ಮಾಡಿದೆ. ಆ ಮಗುವಿನ ಸಾವು ಕುಟುಂಬಕ್ಕೆ ಮರೆಯಲಾರದ ನೋವು ನೀಡಿದೆ. ಬಾಳಿ ಮನೆಯನ್ನು ಬೆಳಗಬೇಕಾಗಿದ್ದ ಮಗು ಹೀಗೆ ಏಕಾಏಕಿ ಅಪಘಾತದಲ್ಲಿ ಮೃತಪಟ್ಟಿರುವುದು ಆ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಅದನ್ನು ತುಂಬಿಕೊಡಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ. ನಿಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ತುಂಬಲು ಸಾಧ್ಯವಿಲ್ಲ. ದೇವರು ನಿಮಗೆ ಕಷ್ಟವನ್ನು ಸಹಿಸುವ ಶಕ್ತಿ ನೀಡಲಿ. ನಿಮ್ಮ ಕುಟುಂಬದ ಜತೆ ನಾವು ಇರುತ್ತೇವೆ ಹಾಗೂ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಕೊಡಿಸುವ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.ಈ ವೇಳೆ ಗಂಗಾಧರ ಮೆಣಸಿನಕಾಯಿ, ಜಾನು ಲಮಾಣಿ, ಅರುಣ ಲಮಾಣಿ, ಟೋಪಣ್ಣ ಲಮಾಣಿ, ಸೋಮಣ್ಣ ಲಮಾಣಿ ಸೇರಿದಂತೆ ಕುಟುಂಬದ ಸದಸ್ಯರು ಇದ್ದರು.

ಎಥೆನಾಲ್‌ ಕಾರ್ಖಾನೆ ಸ್ಥಾಪನೆಗೆ ವಿರೋಧ

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಿರೇಮಲ್ಲಾಪುರ ಗ್ರಾಮದ ಸರ್ವೇ ನಂ.45, 46ರ ರಲ್ಲಿ ಅಲ್ಪೈನ್ ಎಥೆನಾಲ್ ಪ್ರೈವೆಟ್ ಲಿಮಿಟೆಡ್ ರೆಡ್ ಕಂಪನಿ ಸ್ಥಾಪನೆ ಆಗುತ್ತಿದ್ದು, ಇದರಿಂದ ಪರಿಸರಮಾಲಿನ್ಯ ಆಗುವ ಸಾಧ್ಯತೆ ಇದ್ದು, ಈ ಕಂಪನಿ ಸ್ಥಾಪಿಸಲು ಅವಕಾಶ ನೀಡಬಾರದು ಎಂದು ದಲಿತ ಸಂಘಟನಾ ಸಮಿತಿ ಅಲ್ಪಸಂಖ್ಯಾತ ಹಿಂದುಳಿದ ದಲಿತ ಸಂಘದ ಕಾರ್ಯಕರ್ತ ಜಬೀವುಲ್ಬಾ ಎ.ಆರ್. ಆಗ್ರಹಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಥೆನಾಲ್ ರೆಡ್ ಕಂಪನಿ ವಿರುದ್ಧ ಹಿರೇಮಲ್ಲಾಪುರ ಗ್ರಾಮಸ್ಥರು ಅನಿರ್ದಿಷ್ಟಾವಧಿ ಧರಣಿಯನ್ನು ಆರಂಭಿಸಿದ್ದರು. ಪೊಲೀಸ್ ಇಲಾಖೆ ಬಲವಂತವಾಗಿ ಈ ಹೋರಾಟ ಹತ್ತಿಕ್ಕಿದರು. ಅಲ್ಲದೇ, ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಪೊಲೀಸ್ ವಾಹನದಲ್ಲಿ ಕೊಂಡೊಯ್ಯಲಾಗಿದೆ. ಈ ಕುರಿತು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಎಥೆನಾಲ್ ರೆಡ್ ಕಂಪನಿಯಿಂದ ಸುಮಾರು 50ರಿಂದ 100 ಮೀಟರ್ ಅಂತರದಲ್ಲಿ ಹಿರೇಮಲ್ಲಾಪುರ ಗ್ರಾಮವಿದ್ದು, ಈ ಕಂಪನಿಯು ಕೆಂಪು ವರ್ಗದ ಕೈಗಾರಿಕೆಯಾಗಿದೆ. ಇದು ಜನವಸತಿ ಪ್ರದೇಶದಿಂದ ಕೇವಲ 50ರಿಂದ 100 ಮೀಟರ್ ಅಂತರದಲ್ಲಿ ಇರುವುದರಿಂದ ಸರ್ಕಾರದ ಆದೇಶದಂತೆ ಕೆಂಪು ವರ್ಗದ ಕೈಗಾರಿಕೆಗಳು ಜನವಸತಿ ಪ್ರದೇಶದಿಂದ ಕನಿಷ್ಠ 800 ಮೀಟರ್‌ಗಿಂತ ದೂರವಿರಬೇಕೆಂಬ ಆದೇಶವಿದ್ದರೂ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.ಸ್ಥಾಪನೆ ಆಗುತ್ತಿರುವ ಕಂಪನಿಯ ಪಕ್ಕದಲ್ಲಿ ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯವಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಈ ಪ್ರದೇಶಗಳಿಂದ 10 ಕಿಮೀವರೆಗೆ ಯಾವುದೇ ಕೆಂಪು ವರ್ಗಕ್ಕೆ ಸೇರಿದ ಕೈಗಾರಿಕೆಗಳು ಸ್ಥಾಪನೆ ಮಾಡಲು ಅವಕಾಶ ಇರುವುದಿಲ್ಲ ಎಂದರು.

ಈ ವೇಳೆ ದಲಿತ ಸಂಘಟನಾ ಸಮಿತಿ ಅಲ್ಪಸಂಖ್ಯಾತ ಹಿಂದುಳಿದ ದಲಿತ ಸಂಘದ ಜಿಲ್ಲಾಧ್ಯಕ್ಷ ಅನಿಲಕುಮಾರ ಪೂಜಾರ, ಸಂಜೀವಕುಮಾರ ಪೋತರಾಜ, ಹಾಲಪ್ಪ ಬಂಡಾರಿ, ನಾಗರಾಜ ಉಪ್ಪಾರ, ರಜಾಕ ಅಹ್ಮದ್ ಮುಲ್ಲಾನವರ ಇದ್ದರು.