ಔರಾದ(ಬಿ) ತಹಸೀಲ್ದಾರ್‌ ಕಚೇರಿಗೆ ಶಾಸಕ ಚವ್ಹಾಣ ಭೇಟಿ

| Published : Jun 27 2024, 01:10 AM IST

ಔರಾದ(ಬಿ) ತಹಸೀಲ್ದಾರ್‌ ಕಚೇರಿಗೆ ಶಾಸಕ ಚವ್ಹಾಣ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಔರಾದ್ (ಬಿ) ಶಾಸಕರಾದ ಪ್ರಭು ಚವ್ಹಾಣ ಅವರು ಬುಧವಾರ ಔರಾದ್ ತಹಸೀಲ್ದಾರ್‌ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಔರಾದ್

ಹಣ ಕೊಡದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ. ಹಣವಿಲ್ಲದೇ ಕಡತಗಳ ವಿಲೇವಾರಿಯಾಗುತ್ತಿಲ್ಲವೆಂದು ಜನರು ಶಾಸಕರ ಎದುರು ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.

ಔರಾದ್ (ಬಿ) ಶಾಸಕ ಪ್ರಭು ಚವ್ಹಾಣ ಅವರು ಬುಧವಾರ ಔರಾದ್ ತಹಸೀಲ್ದಾರ್‌ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸುತ್ತಿರುವ ಸಂದರ್ಭದಲ್ಲಿ ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ಸಿಬ್ಬಂದಿ ಅವ್ಯವಹಾರದ ವಿಡಿಯೋ ತುಣುಕೊಂದನ್ನು ಶಾಸಕರಿಗೆ ತೋರಿಸಿದರು. ಇದರಿಂದ ಕೋಪಗೊಂಡ ಶಾಸಕರು, ವಿಡಿಯೋ ಪರಿಶೀಲಿಸಿ ಅವ್ಯವಹಾರದಲ್ಲಿ ತೊಡಗಿರುವ ಸಿಬ್ಬಂದಿ ತಕ್ಷಣ ವಜಾಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಜಿಲ್ಲಾಧಿಕಾರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ, ಔರಾದ(ಬಿ) ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ. ದುಡ್ಡಿಲ್ಲದೇ ಯಾವುದೇ ಕೆಲಸಗಳಾಗುತ್ತಿಲ್ಲವೆಂದು ಜನತೆ ದೂರು ಸಲ್ಲಿಸುತ್ತಿದ್ದಾರೆ. ಪ್ರತಿದಿನ ಸಾಕಷ್ಟು ಆರೋಪ ಬರುತ್ತಿವೆ. ಈ ಕಚೇರಿ ಸಮಸ್ಯೆಗಳು ಪ್ರತಿದಿನ ಹೆಚ್ಚುತ್ತಲೇ ಇವೆ. ಸಾಕಷ್ಟು ದೂರುಗಳು ಬರುತ್ತಿದ್ದು, ಇವರಿಂದಾಗಿ ಕ್ಷೇತ್ರದಲ್ಲಿ ನನ್ನ ಹೆಸರು ಕೆಡುತ್ತಿದೆ. ಕೂಡಲೇ ಸಾರ್ವಜನಿಕರಿಗೆ ಸ್ಪಂದಿಸದ ಉಪ ನೋಂದಣಾಧಿಕಾರಿ ಬದಲಿಸಿಸಬೇಕೆಂದು ಸೂಚಿಸಿದರು. ಅಲ್ಲದೇ ಕಚೇರಿ ಅವ್ಯವಸ್ಥೆ ಸರಿಪಡಿಸಬೇಕೆಂದು ತಿಳಿಸಿದರು.

ತಹಸೀಲ್ದಾರ್‌ ಕಚೇರಿಯಲ್ಲಿನ ಸಿಬ್ಬಂದಿ ಶಾಖೆಯಲ್ಲಿನ ವಿವಿಧ ವಿಭಾಗಗಳಲ್ಲಿ ಸಂಚರಿಸಿ, ಏನು ಕೆಲಸ ಮಾಡುತ್ತೀರಿ?, ಪ್ರತಿದಿನ ಎಷ್ಟು ಅರ್ಜಿ ಬರುತ್ತವೆ? ಎಷ್ಟು ವಿಲೇವಾರಿ ಮಾಡುತ್ತೀರಿ ಎಂದೆಲ್ಲ ಪ್ರಶ್ನಿಸಿ ವಿವರಣೆ ಪಡೆದರು. ಕೆಲವು ವಿಭಾಗಗಳಲ್ಲಿ ಸಿಬ್ಬಂದಿ ಗೈರಾಗಿರುವುದನ್ನು ಕಂಡು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಯೋಮೆಟ್ರಿಕ್ ಯಂತ್ರಗಳನ್ನು ಚಾಲನೆ ಮಾಡಬೇಕು. ಗೈರು ಹಾಜರಾದವರು ಮತ್ತು ಸಮಯಕ್ಕೆ ಆಗಮಿಸದವರಿಗೆ ನೋಟಿಸ್ ನೀಡಬೇಕು. ಅವರ ಸಂಬಳ ಕಡಿತಗೊಳಿಸಬೇಕು. ಜನತೆಗೆ ಸ್ಪಂದಿಸದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೇ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದರು.

ಕಚೇರಿ ಆವರಣ ಸ್ವಚ್ಛತೆಗೆ 10 ದಿನ ಗಡುವು:

ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಶಾಸಕರು ಸಂಚರಿಸಿ ಸ್ವಚ್ಛತೆ ಗಮನಿಸಿದರು. ಆವರಣದ ತುಂಬೆಲ್ಲ ಕಸ ಕಡ್ಡಿ, ಗಿಡ-ಗಂಟಿ ಬೆಳೆದಿರುವುದು ಕಾಣಿಸಿತು. ಕುಡಿಯುವ ನೀರಿನ ಯಂತ್ರ ಚಾಲ್ತಿಯಲ್ಲಿರಲಿಲ್ಲ. ಶೌಚಾಲಯ ಹಾಳಾಗಿ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಇರುವುದನ್ನು ಕಂಡು ಶಾಸಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕೂಡಲೇ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೇ ಆವರಣವನ್ನು 10 ದಿನದೊಳಗಾಗಿ ಸ್ವಚ್ಛಗೊಳಿಸಬೇಕೆಂದು ಗಡುವು ವಿಧಿಸಿದರು.

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಕಚೇರಿಗೆ ಹೋದಾಗ ಕಡತಗಳು ಬೇಕಾಬಿಟ್ಟಿಯಾಗಿ ಇಡಲಾಗಿತ್ತು. ನಿರುಪಯುಕ್ತ ಸಾಮಗ್ರಿಗಳಿಂದ ಮತ್ತು ಕಚೇರಿ ತುಂಬೆಲ್ಲ ಧೂಳು ಆವರಿಸಿರುವುದನ್ನು ಕಂಡು ಸಿಬ್ಬಂದಿ ವಿರುದ್ಧ ಕಿಡಿ ಕಾರಿದರು.

ಈ ವೇಳೆ ಔರಾದ(ಬಿ) ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ, ಶಿವರಾಜ ಅಲ್ಮಾಜೆ, ಕೇರಬಾ ಪವಾರ್, ಸಂತೋಷ ಪೋಕಲವಾರ, ಜಗದೀಶ ಪಾಟೀಲ, ಸಿದ್ರಾಮಪ್ಪ ನಿಡೋದೆ ಸೇರಿದಂತೆ ಇತರರಿದ್ದರು.