ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳ ಆಸಕ್ತಿಯ ಕೊರತೆಯಿಂದಾಗಿ ಮತ್ತು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರಕದ ಕಾರಣ ಕ್ರೀಡೆಗಳು ಮರೆ

ಕನ್ನಡಪ್ರಭ ವಾರ್ತೆ ನಂಜನಗೂಡು. ನಂಜನಗೂಡಿನ ಕ್ರೀಡಾ ಇತಿಹಾಸದ ಗತ ವೈಭವವನ್ನು ಮರುಕಳಿಸಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸತತ ಎರಡನೇ ಬಾರಿಗೆ ದಿ. ಆರ್. ಧ್ರುವನಾರಾಯಣ ಅವರ ಮೆಮೋರಿಯಲ್ ಕಪ್ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ದಿ. ಆರ್. ಧ್ರುವನಾರಾಯಣ ಮೆಮೊರಿಯಲ್ ಕಪ್ ರಾಜ್ಯಮಟ್ಟದ ಕ್ರೀಡಾ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಕಳೆದ ಮೂರು ದಶಕಗಳ ಹಿಂದೆ ನಂಜನಗೂಡು ಉತ್ತಮ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಹೊಂದುವ ಮೂಲಕ, ಕ್ರೀಡೆಗಳಿಗೆ ಹೆಚ್ಚು ಹೆಸರುವಾಸಿಯಾಗಿತ್ತು, ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳ ಆಸಕ್ತಿಯ ಕೊರತೆಯಿಂದಾಗಿ ಮತ್ತು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರಕದ ಕಾರಣ ಕ್ರೀಡೆಗಳು ಮರೆಯಾಗುತ್ತಿವೆ, ನಂಜನಗೂಡಿನ ಕ್ರೀಡಾ ಇತಿಹಾಸವನ್ನು ಮರು ಸ್ಥಾಪಿಸಿ ಕ್ರೀಡಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನಂಜನಗೂಡಿನಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತಿದೆ, ನನ್ನ ತಂದೆ ಆರ್. ಧ್ರುವನಾರಾಯಣ್ ರವರು ಕೂಡ ಉತ್ತಮ ಫುಟ್ಬಾಲ್ ಪುಟುವಾಗಿದ್ದರು, ನಾನು ಮತ್ತು ನನ್ನ ತಂದೆ ಮತ್ತು ತಾಯಿ ಜೊತೆಗೆ ಫುಟ್ಬಾಲ್ ಪಂದ್ಯಾವಳಿಗಳನ್ನು ವೀಕ್ಷಣೆ ಮಾಡುತ್ತಿದ್ದೆವು, ಅವರ ಸಂಸ್ಮರಣಾರ್ಥವಾಗಿ, ಹಾಗೂ ಫುಟ್ಬಾಲ್ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ ಅವಕಾಶ ಕಲ್ಪಿಸುವ ಸಲುವಾಗಿ ಸತತ ಎರಡನೇ ಬಾರಿಗೆ ನಂಜನಗೂಡಿನಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ, ಕ್ರೀಡಾಕೂಟದಲ್ಲಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಸುಮಾರು 30 ತಂಡಗಳು ಭಾಗಿಯಾಗಿವೆ ಎಂದರು. ಇಂದಿನ ಯುವಕರು ಶಿಕ್ಷಣದಷ್ಟೇ ಕ್ರೀಡೆಗಳಿಗೂ ಹೆಚ್ಚಿನ ಮಹತ್ವವನ್ನು ನೀಡಬೇಕು, ಕ್ರೀಡೆ ನಮ್ಮ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯಕ್ಕೆ ಸಹಾಯಕಾರಿಯಾಗಿದೆ, ವ್ಯಕ್ತಿಯ ಸಂಪೂರ್ಣ ಬೆಳವಣಿಗೆಗೆ ಶಿಕ್ಷಣ ಮಾತ್ರ ಸಾಲದು ಕ್ರೀಡೆಯು ಕೂಡ ಮಹತ್ವದಾಗಿದೆ ಆದ್ದರಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಇತ್ತೀಚಿನ ಯುವಕರು ದೈಹಿಕ ಕಸರತ್ತಿನ ಆಟಗಳಲ್ಲಿ ತೊಡಗದೆ ಮೊಬೈಲ್ ಮತ್ತು ವಿಡಿಯೋ ಗೇಮ್ ಗಳಲ್ಲಿ ಆಸಕ್ತಿ ತೋರುತ್ತಿರುವುದರಿಂದ ಕ್ರೀಡೆಗಳು ಮರೆಯಾಗುತ್ತಿವೆ, ದೈಹಿಕ ಕಸರತ್ತಿನ ಕ್ರೀಡೆಗಳಿಗೆ ಆದ್ಯತೆ ನೀಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಶಾಸಕ ದರ್ಶನ್ ಧ್ರುವನಾರಾಯಣ್ ರವರು ತಮ್ಮ ತಂದೆ ಹೆಸರಿನಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಖುಷಿ ತಂದಿದೆ, ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಕ್ರೀಡಾಮನೋಭಾವದಿಂದ ಭಾಗಿಯಾಗಿ ಎಂದರು. ಹಿರಿಯ ಫುಟ್ಬಾಲ್ ಆಟಗಾರರಾದ ಯು.ಎನ್. ಪದ್ಮನಾಭರಾವ್ ಮಾತನಾಡಿ., ನಂಜನಗೂಡಿನಲ್ಲಿ ಫುಟ್ಬಾಲ್, ವಾಲಿಬಾಲ್ ಮತ್ತು, ಖೋ ಖೋ ಆಟಗಳ ರಾಷ್ಟ್ರೀಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂಜನಗೂಡು ಕ್ರೀಡೆಗೆ ಹೆಚ್ಚಿನ ಹೆಸರುವಾಸಿಯಾಗಿತ್ತು, ದಸರಾ ಕ್ರೀಡೆಗಳಲ್ಲಿ ನಂಜನಗೂಡು ಹಬ್ಬದ ರೀತಿಯಲ್ಲಿ ಭಾಗಿಯಾಗುತ್ತಿತ್ತು, ಈ ಕ್ರೀಡೆ ಇತಿಹಾಸಕ್ಕೆ ಪುನರ್ಜೀವನ ಕಲ್ಪಿಸಿಕೊಟ್ಟ ಶ್ರೇಯಸ್ಸು ಶಾಸಕ ದರ್ಶನ್ ದ್ರುವ ನಾರಾಯಣ್ ಅವರಿಗೆ ಸಲ್ಲುತ್ತದೆ ಎಂದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠ ನಾಯಕ, ವಿಧಾನಸಭಾ ಉಸ್ತುವಾರಿ ಸೋಮೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ.ಮಾರುತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಮುಖಂಡರಾದ ಕುಳ್ಳಯ್ಯ, ದೊರಸ್ವಾಮಿ ನಾಯಕ, ರಾಜೇಶ್, ಮುರುಗೇಶ್, ಎನ್.ಟಿ. ಗಿರೀಶ್, ಎನ್.ಎಂ. ಮಂಜುನಾಥ್, ಸೋಮು, ಸತೀಶ್ ಗೌಡ, ಅಶೋಕ್, ಶಿವಪ್ಪ ದೇವರು, ಮುದ್ದುಮಾದಶೆಟ್ಟಿ, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ನಗರಸಭಾ ಮಾಜಿ ಸದಸ್ಯರಾದ ಗಂಗಾಧರ್, ಎಸ್.ಪಿ. ಮಹೇಶ್, ತಹಸಿಲ್ದಾರ್ ಶಿವಕುಮಾರ್ ಕಾಸ್ನೂರು, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಇದ್ದರು.