ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸ್ವಚ್ಛ ನಗರವನ್ನಾಗಿ ರೂಪಿಸುವ ಸಲುವಾಗಿ 1.10 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಪಟ್ಟಣದ ಶಂಕರಪುರ, ಅಶೋಕಪುರಂ, ಹುಲ್ಲಹಳ್ಳಿ ರಸ್ತೆಯಲ್ಲಿ 1.10 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ನಂಜನಗೂಡು ಮೈಸೂರಿಗೆ ಅತಿ ಸಮೀಪದ ಪಟ್ಟಣವಾಗಿದ್ದು, ಪಟ್ಟಣದ ಎಲ್ಲ ಬಡಾವಣೆಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸ್ವಚ್ಛ ಮತ್ತು ಮಾದರಿ ನಗರವನ್ನಾಗಿ ರೂಪಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗುವುದು, ಈ ನಿಟ್ಟಿನಲ್ಲಿ ಪ್ರತಿ ಸೋಮವಾರ ಪಟ್ಟಣದ ವಿವಿಧ ಬಡಾವಣೆಗಳಿಗೆ ನಗರಸಭಾ ಅಧಿಕಾರಿಗಳೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಸ್ಥಳದಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.ನೀರಿನ ಶುಲ್ಕದ ಮೇಲಿನ ಬಡ್ಡಿ ಮನ್ನಾ ಮಾಡಲು ಕ್ರಮಪಟ್ಟಣದ ಶ್ರೀರಾಂಪುರ ಬಡಾವಣೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಶಾಸಕ ದರ್ಶನ್ ದ್ರುವನಾರಾಯಣ ಖುದ್ದಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸುವ ಭರವಸೆ ನೀಡಿದರು.ಶ್ರೀರಾಂಪುರ ಬಡಾವಣೆಯಲ್ಲಿ ನಿವಾಸಿಗಳು, ದೋಷಪೂರಿತ ಮೀಟರ್ ಅಳವಡಿಕೆಯಿಂದಾಗಿ ಪ್ರತಿ ಮನೆಗೆ ಅತ್ಯಧಿಕವಾಗಿ ನೀರಿನ ಶುಲ್ಕ ಬರುತ್ತಿದೆ, ಈಗಾಗಲೇ ಪ್ರತಿ ಮನೆಗೆ 20 ರಿಂದ 30 ಸಾವಿರದ ವರೆಗೂ ಬಿಲ್ ನೀಡಲಾಗಿದೆ, ಆದ್ದರಿಂದ ದೋಷಪೂರಿತ ಮೀಟರ್ ಬದಲಿಸಿ, ನೀರಿನ ಶುಲ್ಕವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ನಗರಸಭಾ ಅಧಿಕಾರಿಗಳ ವತಿಯಿಂದ ಅಳವಡಿಕೆಯಾಗಿರುವ ಮೀಟರ್ ಗಳನ್ನು ಪರಿಶೀಲನೆ ನಡೆಸಿ ದೋಷಪೂರಿತವಾಗಿದ್ದಲ್ಲಿ ನೀರಿನ ಶುಲ್ಕವನ್ನು ಕಡಿಮೆ ಮಾಡುವಲ್ಲಿ ಕ್ರಮ ವಹಿಸಲಾಗುವುದು, ಜೊತೆಗೆ ಈಗಾಗಲೇ ಬಳಕೆಯಾಗಿರುವ ನೀರಿಗೆ ಶುಲ್ಕವನ್ನು ಭರಿಸಬೇಕಾಗುತ್ತದೆ. ನೀರಿನ ಶುಲ್ಕದ ಮೇಲಿನ ಬಡ್ಡಿ ಮನ್ನಾ ಮಾಡಲು ನಗರಸಭಾ ಆಡಳಿತ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಿದೆ. ಇನ್ನು ಉಳಿದಂತೆ ವಸತಿ ರಹಿತರಿಗೆ ನಿವೇಶನ ನೀಡುವಂತೆ ಮನವಿ ಮಾಡಿದ್ದೀರಿ ಶೀಘ್ರದಲ್ಲಿ ನಿವೇಶನಗಳನ್ನು ನೀಡಲು ಕ್ರಮವಹಿಸಲಾಗುವುದು, ಜೊತೆಗೆ ಬಡಾವಣೆಗೆ ಅವಶ್ಯವಿರುವ ಎಲ್ಲಾ ಕಾಮಗಾರಿಗಳನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ನಗರಸಭಾಧ್ಯಕ್ಷ ಶ್ರೀಕಂಠಸ್ವಾಮಿ, ಸದಸ್ಯರಾದ ಪ್ರದೀಪ್, ಮಹದೇವಮ್ಮ, ಮಂಗಳಮ್ಮ, ಗಾಯತ್ರಿ, ರವಿ, ಮುಖಂಡರಾದ ಮುರುಗೇಶ್, ಕುಮಾರ್, ದೇವರಾಜು, ಕಮಲೇಶ್, ರಾಜೇಶ್, ಪೌರಾಯುಕ್ತ ವಿಜಯ್, ಎಇಇ ಸಮಂತ್, ಅಧಿಕಾರಿಗಳಾದ ಮೈತ್ರಾದೇವಿ, ರೇಖಾ, ನಂದಿನಿ, ಪ್ರೀತಮ್, ರಾಘವೇಂದ್ರ ಇದ್ದರು.