ಕೆಆರ್ ಎಸ್ ಡ್ಯಾಂನಲ್ಲಿ ಇರುವ ನೀರಿನ ಅಗತ್ಯತೆ ಮೇರೆಗೆ ಮುಂದಿನ ದಿನಗಳಲ್ಲಿ ಕ್ರಮವಹಿಸಲು ಐಸಿಸಿ ಸಭೆ ನಡೆಸಿ ಚರ್ಚಿಸಲಾಗಿದೆ. ಕೆಆರ್ ಎಸ್ ಹಾಗೂ ಹೇಮಾವತಿ ಡ್ಯಾಂನಲ್ಲಿರುವ ನೀರಿನ ಮಾಹಿತಿ ಪಡೆಯಲಾಗಿದೆ. ಸದ್ಯದಲ್ಲಿಯೇ ಮಳೆಯಾಗುವ ಮುನ್ಸೂಚನೆ ಇದ್ದು, ಮಳೆಯಾಗದಿದ್ದರೆ ಕುಡಿಯುವ ನೀರಿಗೆ ಆಧ್ಯತೆ ನೀಡಲಾಗುವುದು .
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ₹1.30 ಕೋಟಿ ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಭೂಮಿಪೂಜೆ ಸಲ್ಲಿಸಿದರು.ತಾಲೂಕಿನ ಕೋಡಹಳ್ಳಿ - ಹೊಸೂರು ಗ್ರಾಮದಲ್ಲಿ ₹25 ಲಕ್ಷ ವೆಚ್ಚ, ಟಿ.ಎಸ್.ಛತ್ರ ಗ್ರಾಮದಲ್ಲಿ ₹25 ಲಕ್ಷ ವೆಚ್ಚ, ಸಂಗಾಪುರ ಗ್ರಾಮದಲ್ಲಿ ₹40 ಲಕ್ಷ , ನರಹಳ್ಳಿಯಲ್ಲಿ ₹20 ಲಕ್ಷ ಹಾಗೂ ಮೇನಾಗರ ಗ್ರಾಮದಲ್ಲಿ ₹20 ಲಕ್ಷ ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕರು, ವೈರಮುಡಿ ಉತ್ಸವದ ಹೆಚ್ಚುವರಿ ಅನುದಾನ ಹಾಗೂ ಪ್ರವಾಹ ಪೀಡಿತ ಹೆಚ್ಚುವರಿ ಅನುದಾನ ಬಳಕೆ ಮಾಡಿ ತಾಲೂಕಿನ ಕೆ.ಹೊಸೂರು, ಟಿ.ಎಸ್.ಛತ್ರ, ಸಂಗಾಪುರ, ಮೇನಾಗರ ಹಾಗೂ ನರಹಳ್ಳಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಲಾಗಿದೆ ಎಂದರು.ಗ್ರಾಮಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಗ್ರಾಮಗಳ ಅಭಿವೃದ್ಧಿಗೂ ಶ್ರಮಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ನಿವಾರಣೆ ಮಾಡಲು ಅಧಿಕಾರಿಗಳಿಗೆ ಕ್ರಮವಹಿಸಲು ಸೂಚಿಸಲಾಗಿದೆ. ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಬೋರ್ ವೆಲ್ ಗಳನ್ನು ಕೊರೆಸಿ ಕ್ರಮ ವಹಿಸಲಾಗುವುದು ಎಂದರು.ಬನಘಟ್ಟ ಬಳಿ ನಿರ್ಮಿಸಿರುವ ಸೇತುವೆ ಕಾಮಗಾರಿ ವೈಜ್ಞಾನಿಕವಾಗಿದೆ ಎಂಬ ವರದಿ ಬಂದಿರುವ ಹಿನ್ನೆಲೆಯಲ್ಲಿ ಶೀಘ್ರವೇ ರಸ್ತೆ ಸರಿಪಡಿಸಿ ಚಾಲನೆ ನೀಡಲಾಗುವುದು. ಜತೆಗೆ ವಿಸಿ ನಾಲೆ ಕಾಮಗಾರಿಯನ್ನೂ ಸಹ ಆರಂಭಿಸಲಾಗುವುದು ಎಂದು ಹೇಳಿದರು.
ಕೆಆರ್ ಎಸ್ ಡ್ಯಾಂನಲ್ಲಿ ಇರುವ ನೀರಿನ ಅಗತ್ಯತೆ ಮೇರೆಗೆ ಮುಂದಿನ ದಿನಗಳಲ್ಲಿ ಕ್ರಮವಹಿಸಲು ಐಸಿಸಿ ಸಭೆ ನಡೆಸಿ ಚರ್ಚಿಸಲಾಗಿದೆ. ಕೆಆರ್ ಎಸ್ ಹಾಗೂ ಹೇಮಾವತಿ ಡ್ಯಾಂನಲ್ಲಿರುವ ನೀರಿನ ಮಾಹಿತಿ ಪಡೆಯಲಾಗಿದೆ. ಸದ್ಯದಲ್ಲಿಯೇ ಮಳೆಯಾಗುವ ಮುನ್ಸೂಚನೆ ಇದ್ದು, ಮಳೆಯಾಗದಿದ್ದರೆ ಕುಡಿಯುವ ನೀರಿಗೆ ಆಧ್ಯತೆ ನೀಡಲಾಗುವುದು ಎಂದರು.ಈ ವೇಳೆ ಕೆ.ಹೊಸೂರು ಗ್ರಾಮದ ಮುಖಂಡರಾದ ಮಂಜು, ಸ್ವಾಮೀಗೌಡ, ಮಧು, ಚಲುವೇಗೌಡ, ಪಾಪಣ್ಣ, ನಾಗಣ್ಣ, ಲೋಕೇಶ್, ಶಂಕರನಾರಾಯಣ, ಸಂಗಾಪುರ ಜಗದೀಶ್, ಪ್ರಕಾಶ್, ಸಣ್ಣೇಗೌಡ, ರಮೇಶ್, ವಿಶ್ವ, ಶಂಕರ್, ನರಹಳ್ಳಿ ಗ್ರಾಮದ ಬೋರೇಗೌಡ, ಶಿವಣ್ಣ, ನಂದೀಶ್, ಸ್ವಾಮೀಗೌಡ, ಜಯರಾಮು, ಕುಮಾರ್ ,ಮರೀಗೌಡ, ಮೇನಾಗರ ಕುಮಾರ್, ಜವರೇಗೌಡ, ಚಲುವರಾಜು ಸೇರಿ ಟಿ.ಎಸ್.ಛತ್ರ ಗ್ರಾಮದ ಮುಖಂಡರು, ಕಾರ್ಯಕರ್ತರು, ಮುಖಂಡರು ಹಾಜರಿದ್ದರು.