ಅರ್ಹ ರೇಷ್ಮೆ ಬೆಳೆಗಾರರಿಗೆ ಶಾಸಕರಿಂದ ಪರಿಕರ ವಿತರಣೆ

| Published : Apr 22 2025, 01:46 AM IST

ಸಾರಾಂಶ

ರೈತರು ಶೇ.25 ರಷ್ಟು ಹಣ ನೀಡಿದರೆ ಸರ್ಕಾರ ಶೇ.75ರಷ್ಟು ಹಣ ನೀಡುತ್ತದೆ. ಎಸ್ಸಿ-ಎಸ್ಟಿ ರೈತರಿಗಾದರೆ ಶೇ.10ರಷ್ಟು ರೈತರು ಹಣ ಕಟ್ಟಿದರೆ ಹಾಗೂ ಶೇ.90ರಷ್ಟು ಸರ್ಕಾರ ಸಹಾಯ ಧನ ನೀಡುತ್ತದೆ. ಇದಲ್ಲದೇ, ಸೋಂಕು ನಿವಾರಣೆಗೆ ಉಚಿತ ಔಷಧಿಗಳ ನೀಡಲಾಗುತ್ತದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರೇಷ್ಮೆ ಬೆಳೆಗಾರರಿಗೆ ಪವರ್ ಸಪ್ಲೈಯರ್ ಮತ್ತು ಸುಧಾರಿತ ಪ್ಲಾಸ್ಟಿಕ್ ಚಂದ್ರಿಕೆ ಸೇರಿದಂತೆ ಇತರ ಪರಿಕರಗಳನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ವಿತರಿಸಿದರು.

ಪಟ್ಟಣದ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಹ ರೇಷ್ಮೆ ಬೆಳಗಾರ ಫಲಾನುಭವಿಗಳಿಗೆ ಅಗತ್ಯ ಪರಿಕರ ವಿತರಿಸಿ ಮಾತನಾಡಿ, ಕೇಂದ್ರ ಪುರಸ್ಕೃತ ಸಿಲ್ಕ್ ಸಮಗ್ರ ಯೋಜನೆಯಡಿ ರೇಷ್ಮೆ ಬೆಳೆಗಾರರಿಗೆ ಸರ್ಕಾರ ಶೇ.75ರಷ್ಟು ರಿಯಾಯ್ತಿ ದರದಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮಾಡಲು ಅಗತ್ಯ ಸಲಕರಣೆ ನೀಡಲಾಗುತ್ತಿದೆ ಎಂದರು.

ರೈತರು ಶೇ.25 ರಷ್ಟು ಹಣ ನೀಡಿದರೆ ಸರ್ಕಾರ ಶೇ.75ರಷ್ಟು ಹಣ ನೀಡುತ್ತದೆ. ಎಸ್ಸಿ-ಎಸ್ಟಿ ರೈತರಿಗಾದರೆ ಶೇ.10ರಷ್ಟು ರೈತರು ಹಣ ಕಟ್ಟಿದರೆ ಹಾಗೂ ಶೇ.90ರಷ್ಟು ಸರ್ಕಾರ ಸಹಾಯ ಧನ ನೀಡುತ್ತದೆ. ಇದಲ್ಲದೇ, ಸೋಂಕು ನಿವಾರಣೆಗೆ ಉಚಿತ ಔಷಧಿಗಳ ನೀಡಲಾಗುತ್ತದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ರೇಷೆ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ ಮಾತನಾಡಿ, ಪ್ರಸ್ತುತ ಇಲಾಖೆಯಿಂದ ಪವರ್ ಸಪ್ಲೈಯರ್ ಮತ್ತು ಸುಧಾರಿತ ಪ್ಲಾಸ್ಟಿಕ್ ಚಂದ್ರಿಕೆ ನೀಡಲಾಗುತ್ತಿದೆ. ಈ ವರ್ಷದಲ್ಲಿ 55 ಮಂದಿ ರೈತರು ಡಿಡಿ ಮೂಲಕ ರಿಯಾಯ್ತಿ ದರದ ಹಣ ನೀಡಿ ಹೆಸರು ನೋಂದಾವಣೆ ಮಾಡಿಕೊಂಡಿದ್ದರು. ಇದರಲ್ಲಿ ಸಾಂಕೇತಿಕವಾಗಿ 25 ಮಂದಿಗೆ ಸದ್ಯದಲ್ಲಿ ನೀಡಿದೆ. ಉಳಿದವುಗಳನ್ನು ಆಯಾ ರೈತರಿಗೆ ತಲುಪಿಸುವ ಕೆಲಸ ಆಗುತ್ತದೆ ಎಂದರು.

ಹುಳು ಸಾಕಾಣಿಕ ಮನೆಗಳ ಬಳಿ ಸೋಂಕು ನಿವಾರಣೆ ಔಷಧಿಗಳನ್ನು ಹುಳುಗಳಿಗೆ ಯಾವುದೇ ಸೋಂಕು ತಗಲದಂತೆ ಔಷಧಿಗಳನ್ನು ಉಚಿತವಾಗಿ ನೀಡಲಾಗಿದೆ. ತಾಲೂಕಿನಾದ್ಯಂತ 1200 ಮಂದಿ ರೈತರು ರೇಷ್ಮೆ ಬೆಳೆ ಮಾಡಲಾಗುತ್ತಿದೆ. ಯಾರು ಸಹಾಯ ಧನಕ್ಕೆ ಅರ್ಜಿ ಸಲ್ಲಿಸಿರುವರು ಅವರಿಗೆ ಈ ಸೌಲಭ್ಯ ನೀಡಲಾಗಿದೆ ಎಂದರು.

ಈ ವೇಳೆ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ರೇಷ್ಮೆ ಸಹಾಯಕ ನಿರ್ದೇಶಕ ಕೃಷ್ಣ, ರೇಷ್ಮೆ ವಿಸ್ತರಣಾಧಿಕಾರಿ ಮಂಗಪ್ಪ, ರೇಷ್ಮೆ ನಿರೀಕ್ಷಕ ವೆಂಕಟೇಶ್ ಸೇರಿದಂತೆ ಇತರ ಸಿಬ್ಬಂದಿ ವರ್ಗ ತಾಲೂಕಿನ ವಿವಿಧ ರೈತರು ಆಗಮಿಸಿದ್ದರು.