ಸಾರಾಂಶ
ಗುಂಡ್ಲುಪೇಟೆ ಹೊರವಲಯದ ವೀರನಪುರ ಕ್ರಾಸ್ ಬಳಿ ಮದ್ದಾನೇಶ್ವರ ಪಬ್ಲಿಕ್ ಶಾಲೆ ಕಟ್ಟಡಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭೂಮಿ ಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಹೊರವಲಯದ ವೀರನಪುರ ಕ್ರಾಸ್ ಬಳಿ ಮದ್ದಾನೇಶ್ವರ ಪಬ್ಲಿಕ್ ಶಾಲಾ ಕಟ್ಟಡಕ್ಕೆ ಪಡಗೂರು, ಮೂಡುಗೂರು, ಕಬ್ಬಹಳ್ಳಿ ಶ್ರೀಗಳ ಸಮ್ಮುಖದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭೂಮಿ ಪೂಜೆ ನೆರವೇರಿಸಿದರು. ಗುದ್ದಲಿ ಪೂಜೆ ಸಮಾರಂಭದಲ್ಲಿ ಪಡಗೂರು ಅಡವಿ ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ, ಮೂಡುಗೂರು ಮಠಾಧೀಶ ಇಮ್ಮಡಿ ಉದ್ದಾನಸ್ವಾಮೀಜಿ, ಕಬ್ಬಹಳ್ಳಿ ಮಠಾಧೀಶ ಗುರುಸಿದ್ದಸ್ವಾಮೀಜಿ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಆರ್.ಲೋಕೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್), ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ಮಂಡಲ ಬಿಜೆಪಿ ಅಧ್ಯಕ್ಷ ಸಿ.ಮಹದೇವಪ್ರಸಾದ್, ಪುರಸಭೆ ಸದಸ್ಯ ಶಶಿಧರ್ ಪಿ ದೀಪು, ಉದ್ಯಮಿ ಛಾಯ, ಪ್ರಾಂಶುಪಾಲ ನಟರಾಜು, ಮುಖ್ಯ ಶಿಕ್ಷಕ ಪ್ರಕಾಶ್, ವಕೀಲ ಗುರುಪ್ರಸಾದ್, ಮುಖಂಡರಾದ ಡಾ.ಮಲ್ಲು ಚಿಕ್ಕತುಪ್ಪೂರು, ಹೋಟೆಲ್ ಮಾಲೀಕ ಪ್ರದೀಪ್, ಶಿವಪುರ ಮಂಜಪ್ಪ, ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಮಠದ ಭಕ್ತರು ಹಲವರಿದ್ದರು.₹5 ಕೋಟಿ ವೆಚ್ಚ:
ತಾಲೂಕಿನ ಪಡಗೂರು ಅಡವಿ ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಮದ್ದಾನೇಶ್ವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಮಾರು ₹5 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಮದ್ದಾನೇಶ್ವರ ಸಂಸ್ಥೆಯ ಕಾರ್ಯದರ್ಶಿ ಎಂ.ಸಿ.ಸ್ವಾಮಿ ಮಾಹಿತಿ ನೀಡಿದ್ದಾರೆ. ಕಳೆದ 7 ವರ್ಷಗಳಿಂದ ಪಟ್ಟಣದ ಮಹಾ ಮನೆಯಲ್ಲಿ ಮದ್ದಾನೇಶ್ವರ ಪಬ್ಲಿಕ್ ಶಾಲೆ ನಡೆಯುತ್ತಿದೆ. 2 ಎಕರೆ ಜಾಗ ಖರೀದಿಸಲಾಗಿದ್ದು, ಹೊಸ ಕಟ್ಟಡದ ಉದ್ಧೇಶದಿಂದ ಚಾಲನೆ ಕೊಡಲಾಗಿದೆ ಎಂದರು. ತಾಲೂಕಿನ ಬಡವರು, ರೈತರ ಮಕ್ಕಳಿಗೆ ಅನುಕೂಲವಾಗಲಿ ಎಂದು ಮದ್ದಾನೇಶ್ವರ ಚಾರಿಟಬಲ್ ಟ್ರಸ್ಟ್ ಪಬ್ಲಿಕ್ ಶಾಲೆ ಆರಂಭಿಸಿತ್ತು. ಇದೀಗ ನೂತನ ಕಟ್ಟಡಕ್ಕೆ ಕಾಲ ಕೂಡಿ ಬಂದಿದ್ದು, ಮುಂದಿನ ವರ್ಷದೊಳಗೆ ಕಾಮಗಾರಿ ಮುಗಿಸಲು ಯೋಜನೆ ಮಾಡಲಾಗಿದೆ ಎಂದರು.