ಸಾರಾಂಶ
ಕೇರಳದ ವಯನಾಡು ಬಳಿ ಭೂಮಿ ಕುಸಿತದಲ್ಲಿ ನಿರಾಶ್ರಿತರಾದ ಕನ್ನಡಿಗರ ಕುಟುಂಬಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ನೆರವಿನ ಹಸ್ತ ಚಾಚಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೇರಳದ ವಯನಾಡು ಬಳಿ ಭೂಮಿ ಕುಸಿತದಲ್ಲಿ ನಿರಾಶ್ರಿತರಾದ ಕನ್ನಡಿಗರ ಕುಟುಂಬಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ನೆರವಿನ ಹಸ್ತ ಚಾಚಿದರು.ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿಯ ಚೂರಲ್ ಮಲ, ಮುಂಡಕೈ ಎರಡು ಗ್ರಾಮಗಳು ಸಂಪೂರ್ಣ ಮುಳುಗಡೆಯಾದ ಸ್ಥಳಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭೇಟಿ ನೀಡಿ ನಿರಾಶ್ರಿತರಿಗೆ ಸಾಂತ್ವನ ಹೇಳಿದರು. ಮೆಪ್ಪಾಡಿಯ ಕಾಳಜಿ ಕೇಂದ್ರದಲ್ಲಿದ್ದ ನಿರಾಶ್ರಿತರಿಗೆ ಉಲ್ಲನ್ ರಗ್ಗುಗಳನ್ನು ಹಾಗೂ ಹತ್ತಕ್ಕೂ ಹೆಚ್ಚು ಕುಟುಂಬಗಳಿಗೆ ತಲಾ ಹತ್ತು ಸಾವಿರ ರು. ವಿತರಿಸಿದರು.ಚುಂಡ ಕಾಳಜಿ ಕೇಂದ್ರದಲ್ಲಿದ್ದ ಕನ್ನಡಿಗ ನಿರಾಶ್ರಿತರಿಂದ ಭೂಮಿ ಕುಸಿತದಿಂದ ಬಗ್ಗೆ ಮಾಹಿತಿ ಪಡೆದುಕೊಂಡ ಬಳಿಕ ಮಾತನಾಡಿದ ಶಾಸಕ ಗಣೇಶ್ ಪ್ರಸಾದ್, ರಾಜ್ಯದ ಮುಖ್ಯಮಂತ್ರಿಗಳು ಕೂಡ ನೂರು ಮನೆಗಳನ್ನು ಕಟ್ಟಿಸಿಕೊಡಲು ಹೇಳಿದ್ದಾರೆ. ಈ ಸಂಬಂಧ ಮತ್ತೆ ಸಿಎಂ ಅವರ ಜೊತೆ ಮಾತನಾಡಿ ನಿಮ್ಮ ಸಮಸ್ಯೆಗಳನ್ನು ತಿಳಿಸಿ, ಬಗೆಹರಿಸುವೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ನಟೇಶ್, ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್, ಪ್ರಗತಿ ಪರ ಕೃಷಿಕ ಚಿದಾನಂದ, ವೈನಾಡಿನ ರಾಜೇಂದ್ರ, ತಾಪಂ ಮಾಜಿ ಸದಸ್ಯ ನೀಲಕಂಠಪ್ಪ, ಪುರಸಭೆ ಸದಸ್ಯ ಮಧು, ಗ್ರಾಪಂ ಸದಸ್ಯರಾದ ಬಿ.ಎನ್.ಪುನೀತ್, ಎಸ್.ಗುರುಪ್ರಸಾದ್, ಮುಖಂಡರಾದ ಕೆ.ಎಂ.ಮಾದಪ್ಪ, ರಘು, ಪ್ರದೀಪ್ ಹೋಟೆಲ್, ದೇವರಹಳ್ಳಿ ಪ್ರಕಾಶ್, ಅಂಕಹಳ್ಳಿ ಅಭಿಷೇಕ್, ಸಯ್ಯದ್ ಇದ್ದರು.ಮೆಪ್ಪಾಡಿ ಭೂ ಕುಸಿತ: ಮನ ಕುಲಕುವ ಘಟನೆ
ಕೇರಳದ ವಯನಾಡಿನ ಮೆಪ್ಪಾಡಿ ಭೂ ಕುಸಿತ ಮನ ಕುಲಕುವ ಘಟನೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಭೂ ಕುಸಿತಗೊಂಡ ಸ್ಥಳದಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿ, ಘಟನೆಯಿಂದ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಬದುಕುಳಿದವರಿಗೂ ಸಾಂತ್ವನ ಹೇಳಿದರು. ಕೇರಳ ಸರ್ಕಾರ ಈ ಘಟನೆಯಲ್ಲಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಎಲ್ಲಾ ಕ್ರಮಗಳನ್ನು ತೆಗದುಕೊಂಡಿದೆ ಎಂದರು.
ಚೂರಲ್ ಮಲೆ, ಮೆಪ್ಪಾಡಿ ಭಾಗದಲ್ಲಿ ಕನ್ನಡಿಗರಿಗೂ ತೊಂದರೆಯಾಗಿದೆ. ರಾಜ್ಯ ಸರ್ಕಾರ ಕೂಡ ನೆರವು ನೀಡಲು ಮುಂದಾಗಿದೆ. ನಾನು ಕೂಡ ಸಿಎಂ ಅವರ ಜೊತೆ ಮಾತನಾಡಿ ಕನ್ನಡಿಗರ ನೆರವು ನೀಡಲು ಮನವಿ ಮಾಡುತ್ತೇನೆ ಎಂದರು.