ಸಾರಾಂಶ
ಹೊಸಪೇಟೆ: ಶಾಸಕ ಎಚ್.ಆರ್. ಗವಿಯಪ್ಪ ಮೊದಲು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲಾಖಾ ಸಚಿವರಿಗೆ ಭೇಟಿಯಾಗಿ ಅನುದಾನ ತರುವುದನ್ನು ಬಿಟ್ಟು ಕುಂಟುನೆಪ ಹೇಳುವುದು ಸರಿಯಲ್ಲ. ಬರೀ ಆರೋಪ ಮಾಡುವುದಲ್ಲ, ಮೊದಲು ಎಷ್ಟು ಇಲಾಖೆಗಳಿವೆ, ಅನುದಾನ ಹೇಗೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಿರಾಜ್ ಶೇಕ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಕನ್ನಡಪ್ರಭದೊಂದಿಗೆ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರೇ ಆಗಿ, ಸರ್ಕಾರದ ವಿರುದ್ಧ ಮಾತನಾಡುವುದು ಸರಿಯಲ್ಲ. ಸರ್ಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿದ್ದಾರೆ. ತುಂಗಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಂದ್ರೂ ಇವರು ಬರಲಿಲ್ಲ. ಸುಖಾಸುಮ್ಮನೆ, ಕುಂಟುನೆಪ ಹೇಳಿ ತಪ್ಪಿಸಿಕೊಂಡರು. ಈಗ ನೋಡಿದರೆ, ವಿಜಯನಗರ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಬೆಂಗಳೂರಿಗೆ ತೆರಳಿ ಅನುದಾನ ತರಬೇಕು. ಬರೀ ಕೆಕೆಆರ್‌ಡಿಬಿ ಒಂದೇ ಅಲ್ಲ, ಹಲವು ಇಲಾಖೆಗಳಿವೆ. ಅನುದಾನ ಬರುತ್ತದೆ. ತರುವ ಮಾರ್ಗ ಗೊತ್ತಿರಬೇಕಲ್ಲ ಎಂದು ಖಾರವಾಗಿಯೇ ಪ್ರಶ್ನಿಸಿದರು.ವಿಜಯನಗರ ಕ್ಷೇತ್ರಯೊಂದಕ್ಕೆ ಸಿದ್ದರಾಮಯ್ಯ ಸರ್ಕಾರ ₹138 ಕೋಟಿ ಅನುದಾನ ನೀಡಿದೆ. ಕೆಕೆಆರ್‌ಡಿಬಿ ಅಡಿ ₹50 ಕೋಟಿ ಬಂದಿದೆ. ಈ ಪೈಕಿ ₹29 ಕೋಟಿ ಜಿಲ್ಲಾಸ್ಪತ್ರೆಗೆ ಬಿಡುಗಡೆಯಾಗಿದೆ. ಮೈಕ್ರೋ ಅಡಿ ₹19 ಕೋಟಿ, ಸಿಎಂ ವಿವೇಚನಾ ನಿಧಿಯಡಿ ಐದು ಕೋಟಿ ರು. ಅನುದಾನ ಬಂದಿದೆ. ಪಂಚಾಯತ್‌ರಾಜ್ ಇಲಾಖೆಯಡಿ ₹20 ಕೋಟಿ, ಲೋಕೋಪಯೋಗಿ ಇಲಾಖೆಗೆ ₹15 ಕೋಟಿ ಮತ್ತು ಅಲ್ಪಸಂಖ್ಯಾತ ಇಲಾಖೆಗೆ ₹20 ಕೋಟಿ ಬಂದಿದೆ. ಶಾಸಕ ಗವಿಯಪ್ಪ ಐದು ಕೋಟಿ ರು.ಗೆ ಮಾತ್ರ ಕ್ರಿಯಾ ಯೋಜನೆ ರೂಪಿಸಿದ್ದಾರೆ. ಉಳಿದ ₹15 ಕೋಟಿಗೆ ಕ್ರಿಯಾ ಯೋಜನೆ ರೂಪಿಸಿಲ್ಲ. ಕಾಂಗ್ರೆಸ್ ಕಾರ್ಯಕರ್ತರನ್ನು ಕೂಡ ಕ್ಷೇತ್ರದಲ್ಲಿ ಶಾಸಕರು ಕಡೆಗಣಿಸುತ್ತಿದ್ದಾರೆ. ಪಕ್ಷದ ಚಿಹ್ನೆಯಡಿ ಗೆದ್ದು ಪಕ್ಷದ ಕಾರ್ಯಕರ್ತರನ್ನೇ ಕಡೆಗಣಿಸುವುದು ಸರಿಯಲ್ಲ. ನಗರಸಭೆ ಚುನಾವಣೆಯಲ್ಲೂ ಸಹಕಾರ ನೀಡಿಲ್ಲ ಎಂದು ದೂರಿದರು.