ಜಿಲ್ಲಾಡಳಿತದ ವಿರುದ್ಧ ಶಾಸಕ‌‌ ಗುರುರಾಜ್‌ ಗಂಟಿಹೊಳೆ ದಿಢೀರ್‌ ಧರಣಿ

| Published : Aug 13 2024, 12:58 AM IST

ಜಿಲ್ಲಾಡಳಿತದ ವಿರುದ್ಧ ಶಾಸಕ‌‌ ಗುರುರಾಜ್‌ ಗಂಟಿಹೊಳೆ ದಿಢೀರ್‌ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಗುರುರಾಜ್‌ ಗಂಟಿಹೊಳೆ ಅವರು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಿಗದಿಗೊಳಿಸಿದ್ದರು. ಆದರೆ ಈ ಸಭೆಗೆ ಅಧಿಕಾರಿಗಳು ಹೋಗದಂತೆ ಜಿಲ್ಲಾಧಿಕಾರಿಗಳು ಕರೆ ಮಾಡಿ ಸೂಚಿಸಿದ ಹಿನ್ನೆಲೆ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ ಎಂದು ಆರೋಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಜಿಲ್ಲಾಡಳಿತ ಶಾಸಕರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ತರುತ್ತಿದೆ ಎಂದು ಆರೋಪಿಸಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಸೋಮವಾರ ಸಂಜೆ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಬೆಂಬಲಿಗರೊಂದಿಗೆ ದಿಢೀರ್‌ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.ಶಾಸಕ ಗುರುರಾಜ್‌ ಗಂಟಿಹೊಳೆ ಅವರು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಿಗದಿಗೊಳಿಸಿದ್ದರು. ಆದರೆ ಈ ಸಭೆಗೆ ಅಧಿಕಾರಿಗಳು ಹೋಗದಂತೆ ಜಿಲ್ಲಾಧಿಕಾರಿಗಳು ಕರೆ ಮಾಡಿ ಸೂಚಿಸಿದ ಹಿನ್ನೆಲೆ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ ಎಂದು ಆರೋಪಿಸಲಾಗಿದೆ. ಈ ಬೆಳವಣಿಗೆಯಿಂದ ಕೆರಳಿದ ಶಾಸಕ ಗಂಟಿಹೊಳೆ, ಜಿಲ್ಲಾಡಳಿತದ ವಿರುದ್ಧವೇ ಬೈಂದೂರು ತಾಲೂಕು ಆಡಳಿದ ಸೌದಧ ಮುಂಭಾಗದಲ್ಲಿ ಕಾರ್ಯಕರ್ತರೊಂದಿಗೆ ಧರಣಿ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕರು, ಜನ ಕರೆದಲ್ಲಿಗೆ ನಾನು ಹೋಗಬೇಕು, ನಾನು ಕರೆದಲ್ಲಿಗೆ ಜನರ ಅಹವಾಲು ಸ್ವೀಕರಿಸಲು ಅಧಿಕಾರಿಗಳು ಬರಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇರುವುದು ಜನಸೇವೆಗೆ. ಸರ್ಕಾರ ನೀಡಿದ ಒಂದು ಕಚೇರಿಯಲ್ಲಿ ಕಾಲ ಮೇಲೆ ಕಾಲು ಹಾಕಿ ದರ್ಬಾರ್‌ ನಡೆಸುವ ವ್ಯಕ್ತಿ ನಾನಲ್ಲ. ತಾಲೂಕಿನ ಜನತೆಯ ಉಪಯೋಗಕ್ಕಾಗಿ ಕ್ಷೇತ್ರದ ನಾಲ್ಕು ಭಾಗಗಳಲ್ಲಿ ''''ಕಾರ್ಯಕರ್ತ'''' ಹೆಸರಿನ ಕಚೇರಿ ತೆರೆದಿದ್ದೇನೆ. ಈ ಕಚೇರಿಗಳಲ್ಲಿ ನಡೆಯುವ ಸಭೆಗಳಿಗೆ ಅಧಿಕಾರಿಗಳು ಹೋಗದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡುತ್ತಿರುವುದು ಏಕೆ? ಜಿಲ್ಲಾಧಿಕಾರಿಗಳಿಗೆ ರಾಜಕೀಯ ಒತ್ತಡವಿದ್ದರೆ ನೇರ ಹೇಳಿ ಬಿಡಲಿ ಎಂದಿದ್ದಾರೆ.

------ಶಾಸಕನ ಹಕ್ಕು ಮೊಟಕುಗೊಳಿಸುತ್ತಿರುವ ಆಡಳಿತಯಂತ್ರದ ವಿರುದ್ಧ ಅಹೋರಾತ್ರಿ ಧರಣಿಯ ಸಮರ ಸಾರಿದ್ದೇನೆ. ಸ್ಪಷ್ಟನೆ ಲಭ್ಯವಾಗುವವರೆಗೆ ವಿರಮಿಸುವ ಮಾತೇ ಇಲ್ಲ.

। ಗುರುರಾಜ್ ಗಂಟಿಹೊಳೆ, ಶಾಸಕರು ಬೈಂದೂರು