ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ನಗರೋತ್ಥಾನ ಯೋಜನೆಯ ಮೊದಲನೇ ಹಂತದ ಕಾಮಗಾರಿಗಳು 14 ತಿಂಗಳುಗಳಾದರೂ ಪೂರ್ಣಗೊಂಡಿಲ್ಲ. ನಾಗರಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದು, 45 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿಗೆ ಶಿಫಾರಸು ಮಾಡುತ್ತೇನೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಎಚ್ಚರಿಸಿದರು.ನಗರಸಭೆಯ ಸಭಾಂಗಣದಲ್ಲಿ ಸೋಮವಾರ ನಗರಸಭೆ ಅಧಿಕಾರಿಗಳು ಮತ್ತು ನಗರೋತ್ಥಾನ ಯೋಜನೆಯ ಮೊದಲ ಹಂತದ ಕಾಮಗಾರಿಯ ಗುತ್ತಿಗೆ ಪಡೆದಿರುವ ಕೆಟಿಆರ್ ಕನ್ಸ್ಟ್ರಕ್ಷನ್ಸ್ ನ ಸಿಬ್ಬಂದಿಯೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
10 ಕೋಟಿ ರು. ಗಳ ವೆಚ್ಚದಡಿ ನಗರದಲ್ಲಿ ಒಟ್ಟು 325 ಕಾಮಗಾರಿಗಳನ್ನು ಕೆಟಿಆರ್ ಕನ್ಸ್ಟ್ರಕ್ಷನ್ ಗೆ ನೀಡಲಾಗಿದೆ. ವಿಧಾನಸಭ ಚುನಾವಣೆಗೂ ಮುನ್ನಾ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದೆ. 14 ತಿಂಗಳುಗಳೇ ಕಳೆದರೂ ಕಾಮಗಾರಿ ಶೇ. 20ರಷ್ಟು ಕೂಡ ಪ್ರಗತಿಯಾಗಿಲ್ಲ. ಮೈಸೂರು ಜಿಲ್ಲೆಯ ಇನ್ನಿತರ ನಗರಸಭೆ, ಪುರಸಭೆ, ಪಪಂ ವ್ಯಾಪ್ತಿಯಲ್ಲಿ ನಗರೋತ್ಥಾನಯೋಜನೆ ಜಾರಿಗೊಂಡು ಕಾಮಗಾರಿ ಸಂಪೂರ್ಣಗೊಂಡಿವೆ. ಆದರೆ ಹುಣಸೂರಿನಲ್ಲಿ ಮಾತ್ರ ಏಕೆ ಮಾಡಿಲ್ಲ? ನಿಮಗೆ ನಗರಸಭೆ ಅಧಿಕಾರಿಗಳ ಸಹಕಾರ ಸಿಗುತ್ತಿಲ್ಲವೇ? ನಿಮ್ಮದೇ ಆದ ಸಮಸ್ಯೆ ಇದೆಯೇ? ವಿಳಂಬಕ್ಕೆ ಕಾರಣವೇನು ತಿಳಿಸಿ ಎಂದು ಸಭೆಯಲ್ಲಿ ಹಾಜರಿದ್ದ ಪ್ರಾಜೆಕ್ಟ್ ಇನ್ಸ್ಪೆಕ್ಟರ್ ತೇಜಸ್ ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಈ ವೇಳೆ ಮಾತನಾಡಿದ ತೇಜಸ್, ಕಾಮಗಾರಿ ಕೈಗೊಳ್ಳುವ ರಸ್ತೆಗಳ ಕ್ಲಿಯರೆನ್ಸ್ ನ್ನು ನಗರಸಭೆ ಮಾಡಿಕೊಡುತ್ತಿಲ್ಲ. ಹಾಗಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ದೂರಿದಾಗ, 325 ಕಾಮಗಾರಿಗಳಲ್ಲಿ ಎಷ್ಟು ಕಾಮಗಾರಿಗಳಲ್ಲಿ ಇಂತಹ ಅಡೆತಡೆಗಳಿವೆ ಎಂದು ಶಾಸಕ ಕೇಳಿದಾಗಿ ತೇಜಸ್ ಮೌನಕ್ಕೆ ಶರಣಾದರು. ನೀವು ಒಂದು ಬ್ಯಾಚ್ ಕಾರ್ಮಿಕರನ್ನು ಹಿಡಿದುಕೊಂಡು ಯಾವ ಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸಾದ್ಯ ಎಂದು ಪ್ರಶ್ನಿಸಿದರು.
ಪಿಎಂಸಿ ಏನು ಮಾಡುತ್ತಿದೆ?ಯೋಜನೆಯ ಸಮಗ್ರ ನಿರ್ವಹಣೆ ಮತ್ತು ಪರಿಶೀಲನೆ ನಡೆಸುವ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂನ್ಸಿ ತಂಡ ಏನು ಮಾಡುತ್ತಿದೆ ಎಂದು ತಂಡದ ಮುಖ್ಯಸ್ಥ ಚೇತನ್ ಅವರನ್ನು ಶಾಸಕರು ಪ್ರಶ್ನಿಸಿದಾಗ, ಈಗಾಗಲೇ ಗುತ್ತಿಗೆದಾರನಿಗೆ 8 ಬಾರಿ ನೋಟೀಸ್ ನೀಡಲಾಗಿದೆ. ಮಾತ್ರವಲ್ಲದೇ ದಂಡಶುಲ್ಕ ವಿಧಿಸಲು ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
45 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ:ನೀವೇನು ಮಾಡುತ್ತೀರೋ ನನಗೆ ಗೊತ್ತಿಲ್ಲ. ಜು. 17ರೊಳಗೆ ಶೇ. 75ರಷ್ಟು ಕಾಮಗಾರಿ ಪೂರ್ಣಗೊಳಿಸಿರಬೇಕು. ಅಂದು ಮತ್ತೆ ಸಭೆ ಆಯೋಜಿಸಲು ಪೌರಾಯುಕ್ತರಿಗೆ ಸೂಚಿಸಿದ್ದೇನೆ. ಶೇ. 75ರಷ್ಟು ಕಾಮಗಾರಿಪೂರ್ಣಗೊಂಡಿದ್ದರೆ ಬಾಕಿ ಇರುವ ಕಾಮಗಾರಿ ನಡೆಸಲು ಅನುಮತಿ ನೀಡಲಾಗುವುದು. ಇಲ್ಲದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಿ ಜಿಲ್ಲಾದಿಕಾರಿಗಳಿಗೆ ತಿಳಿಸಲಾಗುವುದು ಎಂದು ಎಚ್ಚರಿಸಿದರು.
ಕ್ಲಿಯರೆನ್ಸ್ ಆಗದ ರಸ್ತೆಗಳನ್ನು ಗುರುತಿಸಿ:ಈ ನಡುವೆ ನಗರವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ ಸೂಚಿಸಿರುವ ರಸ್ತೆಗಳಲ್ಲಿ ರೋಡ್ ಕ್ಲಿಯರೆನ್ಸ್ ಕಾಮಗಾರಿ ಬಾಕಿ ಇರುವ ರಸ್ತೆಗಳನ್ನು ಗುರುತಿಸಿ ಕೂಡಲೇ ಕಾಮಗಾರಿ ನಡೆಸಿ ನಗರೋತ್ಥಾನ ಯೋಜನೆಯ ಕಾಮಗಾರಿ ಸುಲಲಿತವಾಗಿ ನಡೆಯುವಂತೆ ಕ್ರಮವಹಿಸಬೇಕೆಂದು ನಗರಸಭೆ ಎಂಜಿನಿಯರ್ ಶಮಂತ್ ಅವರ ಶಾಸಕ ಹರೀಶ್ ಗೌಡ ಸೂಚಿಸಿದರು.
ಎಇಇ ಶರ್ಮಿಳಾ, ನಗರಸಭೆ ಸದಸ್ಯರಾದ ಕೃಷ್ಣರಾಜ ಗುಪ್ತ, ಸತೀಶ್ ಕುಮಾರ್, ವಿವೇಕಾನಂದ , ಪರಿಸರ ಎಂಜಿನಿಯರ್ ಎಲ್. ರೂಪಾ, ನಗರಸಭೆ ಸಿಬ್ಬಂದಿ ಇದ್ದರು.