ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಹಕ್ಕು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಜನರು ಅರಣ್ಯ ಹಕ್ಕುಗಳ ಮಂಜೂರಾತಿ ಪಟ್ಟಿ ಪಡೆಯುವಲ್ಲಿ ಎದುರಿಸುತ್ತಿರುವ ತೊಂದರೆ ಕುರಿತು ಶಾಸಕ ಶಿವರಾಮ ಹೆಬ್ಬಾರ್‌ ಅವರು ಗುರುವಾರ ಸದನದ ಗಮನ ಸೆಳೆದಿದ್ದಾರೆ.

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಹಕ್ಕು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಜನರು ಅರಣ್ಯ ಹಕ್ಕುಗಳ ಮಂಜೂರಾತಿ ಪಟ್ಟಿ ಪಡೆಯುವಲ್ಲಿ ಎದುರಿಸುತ್ತಿರುವ ತೊಂದರೆ ಕುರಿತು ಶಾಸಕ ಶಿವರಾಮ ಹೆಬ್ಬಾರ್‌ ಅವರು ಗುರುವಾರ ಸದನದ ಗಮನ ಸೆಳೆದರು.

ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಾನೂನು ಅನುಕೂಲಕರವಾಗಿದ್ದರೂ ಅಧಿಕಾರಿಗಳ ಅಸಡ್ಡೆಯಿಂದಾಗಿ ಈ ವರೆಗೂ ಅರಣ್ಯವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ಇದನ್ನು ಗಂಭೀರವಾಗಿ ಸ್ವೀಕರಿಸಿ, ಸಮಸ್ಯೆಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

೨೦೦೬ರಲ್ಲಿ ಮನಮೋಹನ ಸಿಂಗ್ ಅವರ ಅಧಿಕಾರದಲ್ಲಿ ಬುಡಕಟ್ಟು ಇಲಾಖೆಯಿಂದ ಅರಣ್ಯ ಅತಿಕ್ರಮಣದಾರರಿಗೆ ಅತಿಕ್ರಮಣ ಭೂಮಿ ಮಂಜೂರಿ ಮಾಡುವಂತೆ ಕಾನೂನು ತರಲಾಯಿತು. ೨೦೦೬ರಿಂದ ಈ ವರೆಗೆ ಲಕ್ಷಾಂತರ ಜನ ಭೂಮಿ ಮಂಜೂರಿಗಾಗಿ ಕಾಯುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ೮೮,೪೫೩ ಅತಿಕ್ರಮಣದಾರರು ಅರ್ಜಿ ಹಾಕಿದ್ದು, ೭೩,೮೫೯ (ಶೇ. ೮೩.೫೦) ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಈ ಎಲ್ಲ ಅರ್ಜಿಗಳನ್ನು ತಿರಸ್ಕಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದನ್ನು ಎತ್ತಿ ಹೇಳಿದರು.

ಅರಣ್ಯ ಸಚಿವರು ಉನ್ನತ ಮಟ್ಟದ ಸಭೆ ಕರೆದು ಸೂಕ್ತ ನಿರ್ಣಯ ಮಾಡದೇ ಹೋದರೆ ಈ ತೊಂದರೆ ಸದಾ ಮುಂದುವರಿಯುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳದೇ ಹೋದರೆ ಉತ್ತರ ಕನ್ನಡದ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬ ಅನಾಥವಾಗುವ ಪರಿಸ್ಥಿತಿ ಬರುತ್ತದೆ. ಆ ನಿಟ್ಟಿನಲ್ಲಿ ನಾಲ್ಕೈದು ಸಭೆಗಳು, ಸಾವಿರಾರು ಹೋರಾಟಗಳು ನಡೆದಿವೆ. ಆದರೆ ಇದುವರೆಗೂ ಪರಿಹಾರ ದೊರೆತಿಲ್ಲ. ಅರ್ಜಿ ತಿರಸ್ಕಾರ ಮಾಡಿರುವುದು ಜನರಿಗೆ ಮಾಡಿದ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಮಸ್ಯೆ ಇರುವುದು ಅರಣ್ಯ ಇಲಾಖೆಯಲ್ಲಿ, ಹಾಗೆಯೇ ಇದನ್ನು ಮಂಜೂರಿ ಮಾಡುವ ನೋಡಲ್ ಏಜೆನ್ಸಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರದ್ದು. ಈ ಎರಡೂ ಮಂತ್ರಿಗಳೂ ಸೇರಿ ಅರಣ್ಯ ಇಲಾಖೆಯ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತೇನೆ ಎಂದರು.