ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿದ ಶಾಸಕ ಎಚ್.ಆರ್. ಗವಿಯಪ್ಪ

| Published : May 25 2025, 01:21 AM IST

ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿದ ಶಾಸಕ ಎಚ್.ಆರ್. ಗವಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿರಾ ಕ್ಯಾಂಟೀನ್ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರಿಗೆ ಮಾತ್ರವಲ್ಲದೇ ಹಂಪಿಗೆ ಬರುವ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಇಂದಿರಾ ಕ್ಯಾಂಟೀನ್ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರಿಗೆ ಮಾತ್ರವಲ್ಲದೇ ಹಂಪಿಗೆ ಬರುವ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ತಾಲೂಕಿನ ಕಮಲಾಪುರ ಪಟ್ಟಣದಲ್ಲಿ 2ನೇ ವಾರ್ಡ್‌ನಲ್ಲಿ ನಿರ್ಮಾಣವಾದ ನೂತನ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಶನಿವಾರ ಉದ್ಘಾಟನೆ ಮಾಡಿ ಮಾತನಾಡಿದರು.

ಬಡವರ ಸಲುವಾಗಿಯೇ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಹಿಂದಿನ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಅದನ್ನು ಒಳ್ಳೆಯತನದಿಂದ ನಡೆಸಿಕೊಂಡು ಇಂದಿನ ಸರ್ಕಾರ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.

ಯೋಜನೆಗಳು ಬಹಳಷ್ಟು ಬರುತ್ತವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಮಹತ್ವದ್ದು. ಟೆಂಡರ್ ಪಡೆದ ಗುತ್ತಿಗೆದಾರ ಜನರಿಗೆ ಗುಣಮಟ್ಟದ ಆಹಾರ ಒದಗಿಸಬೇಕು. ದೂರು ಬಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜನಸಾಮಾನ್ಯರಿಗೆ ಗ್ರಾಮೀಣ ಭಾಗಗಳಿಂದ ಪಟ್ಟಣ, ನಗರ ಪ್ರದೇಶಗಳಿಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುವಾಗ ಇಂದಿರಾ ಕ್ಯಾಂಟೀನ್ ನಲ್ಲಿ ಸಿಗುವ ಕಡಿಮೆ ಬೆಲೆಯ ಆಹಾರ ಬಡವರ ಹೊಟ್ಟೆ ತುಂಬಿಸುತ್ತದೆ. ಇಂದಿನ ದುಬಾರಿ ದಿನಮಾನದಲ್ಲಿಯೂ ಕಡಿಮೆ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್ ಬಡವರಿಗೆ ವರವಾಗಿದೆ ಎಂದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಟಿಫಿನ್‌ಗೆ 5 ರು., ಊಟಕ್ಕೆ 10 ರು., ನಿಗದಿ ಮಾಡಿದ್ದು, ಒಂದು ದಿನಕ್ಕೆ ಬೆಳಗ್ಗೆ 300 ಟಿಫಿನ್, ಮಧ್ಯಾಹ್ನ ಊಟ ಮತ್ತು ರಾತ್ರಿ 300 ಊಟದ ವ್ಯವಸ್ಥೆಯನ್ನು ಇಂದಿರಾ ಕ್ಯಾಂಟೀನ್‌ನಲ್ಲಿ ಮಾಡಲಾಗುತ್ತಿದೆ. ಇದು ಬಡವರಿಗೆ ಖಂಡಿತ ನೆರವಾಗುವ ಭರವಸೆ ಇದೆ ಎಂದರು.

ಪುರಸಭೆ ಉಪಾಧ್ಯಕ್ಷ ಗೋಪಾಲ ಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್, ಮುಖ್ಯಾಧಿಕಾರಿ ಡಿ.ಬಿ. ಈರಣ್ಣ, ಮುಖಂಡರಾದ ಖಾಜಾ ಹುಸೇನ್, ಸತೀಶ್, ಒಬ್ಬಯ್ಯ ಮತ್ತಿತರರಿದ್ದರು.