ಮಾರೇನಹಳ್ಳಿಗೆ ಶಾಸಕ ಎಚ್.ಟಿ.ಮಂಜು ಭೇಟಿ, ಮಾಹಿತಿ ಸಂಗ್ರಹ

| Published : Aug 31 2024, 01:39 AM IST

ಸಾರಾಂಶ

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತಾಲೂಕು ಆರೋಗ್ಯ ಇಲಾಖೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಗ್ರಾಮಸ್ಥರು ಯಾವುದೇ ಆತಂಕ ಪಡಬಾರದು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಸೂಕ್ತ ಮುನ್ನೆಚ್ಚರಿಕೆಯ ಕ್ರಮ ವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ ತಾಲೂಕಿನ ಮಾರೇನಹಳ್ಳಿಗೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಸ್ಥರ ಮನೆಗಳ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು.

ಗ್ರಾಮ ವ್ಯಾಪ್ತಿಯ ಭಾರತೀಪುರ ಕ್ರಾಸ್ ನ ಸರ್ಕಾರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಸಭೆ ನಡೆಸಿ ಮಾಹಿತಿ ಪಡೆದ ಶಾಸಕರು, ಜನರಿಗೆ ನೀರು ಪೂರೈಕೆ ಕೇಂದ್ರಗಳು ಹಾಗೂ ಮತ್ತಿತರ ಕಡೆ ತೆರಳಿ ಸ್ಥಳ ಪರಿಶೀಲಿಸಿದರು.

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತಾಲೂಕು ಆರೋಗ್ಯ ಇಲಾಖೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಗ್ರಾಮಸ್ಥರು ಯಾವುದೇ ಆತಂಕ ಪಡಬಾರದು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಸೂಕ್ತ ಮುನ್ನೆಚ್ಚರಿಕೆಯ ಕ್ರಮ ವಹಿಸಿದ್ದಾರೆ ಎಂದು ಹೇಳಿದರು.

ರಾಜ್ಯ ತಂಡ ವೈದ್ಯರು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ. ಆರೋಗ್ಯ ಇಲಾಖೆಯೂ ಮಾಹಿತಿ ಪಡೆದಿದೆ. ವೈದ್ಯರ ಸೂಚನೆಯನ್ನು ಗ್ರಾಮಸ್ಥರು ಪಾಲಿಸಬೇಕು. ವಾಂತಿ ಬೇಧಿ ಪ್ರಕರಣ ನಿಂತಿದೆ. ಅದು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಗ್ರಾಮಸ್ಥರು ಸಾಧ್ಯವಾದಷ್ಟು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.

ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಅಜಿತ್ ಶಾಸಕರಿಗೆ ಮಾಹಿತಿ ನೀಡಿ, ಗ್ರಾಮದ ಕುಡಿಯುವ ನೀರು ಪೂರೈಕೆ ಜಾಲದ ಸರ್ವ ಪರಿವೀಕ್ಷಣೆ ಮಾಡಲಾಗಿದೆ. ನೀರು ಕುಡಿಯಲು ಯೋಗ್ಯವಾಗಿದೆ ಎಂದು ಪ್ರಯೋಗಾಲಯದ ವರದಿ ಬಂದಿದೆ ಎಂದು ಹೇಳಿದರು.

ಹಾಸನ, ಚನ್ನರಾಯಪಟ್ಟಣ ಮುಂತಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದವರು ಗುಣಮುಖರಾಗುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.

ತಾಪಂ ಇಒ ಸ್ವಪ್ನಾ, ಪಿಡಿಒ ದಿನೇಶ್, ಭಾರತೀಪುರ ಕ್ರಾಸ್ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಹರ್ಷವರ್ಧಿನಿ, ಗ್ರಾಪಂ ಅಧ್ಯಕ್ಷ ಕುಬೇರ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ರವಿಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಂ, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್ ಸೇರಿದಂತೆ ಹಲವರಿದ್ದರು.