ನಂದಿನಿ ಬ್ರಾಂಡ್ ಹೆಸರಿನಲ್ಲಿ ಒಂದು ಮತ್ತು ಎರಡು ಲೀಟರ್ ಹಾಗೂ 500 ಎಂ.ಎಲ್ ಸಾಮರ್ಥ್ಯದ ಬಾಟಲಿಗಳಲ್ಲಿ ಶೇಖರಣೆ ಮಾಡಿ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಮಾರಾಟ ಮಾಡಲಾಗುವುದು. ಈ ಹಿಂದೆ ಒಕ್ಕೂಟದಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಗೆಜ್ಜಲಗೆರೆ ಸಮೀಪದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಂದಿನಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.ಪಟ್ಟಣದ ಎಲ್ಐಸಿ ಕಚೇರಿ ಸಮೀಪದ ಹಾಲು ಒಕ್ಕೂಟದ ನಿವೇಶನದಲ್ಲಿ ಸುಮಾರು 4 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಉಪಕಚೇರಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟದಲ್ಲಿ ನಂದಿನಿ ಬ್ರಾಂಡ್ ಗ್ರಾಹಕರಿಗೆ ಹಾಲು, ಮೊಸರು ಮಾರಾಟದ ಜೊತೆಗೆ ಪ್ರಸ್ತುತ ಹಾಲಿನ ಪುಡಿ, ಮತ್ತು ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಈಗ ಒಕ್ಕೂಟದಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದರು.
ನಂದಿನಿ ಬ್ರಾಂಡ್ ಹೆಸರಿನಲ್ಲಿ ಒಂದು ಮತ್ತು ಎರಡು ಲೀಟರ್ ಹಾಗೂ 500 ಎಂ.ಎಲ್ ಸಾಮರ್ಥ್ಯದ ಬಾಟಲಿಗಳಲ್ಲಿ ಶೇಖರಣೆ ಮಾಡಿ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಮಾರಾಟ ಮಾಡಲಾಗುವುದು. ಈ ಹಿಂದೆ ಒಕ್ಕೂಟದಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅವರ ಸೂಚನೆಯಂತೆ ನೀರು ಘಟಕ ನಿರ್ಮಾಣಕ್ಕೆ ಸಹಕಾರ ಸಚಿವ ಲಕ್ಷ್ಮಣ ಸವದಿ ಅನುಮೋದನೆ ನೀಡಿದ್ದಾರೆ. ಶೀಘ್ರದಲ್ಲೇ ಒಕ್ಕೂಟದಲ್ಲಿ ಶುದ್ಧ ಕುಡಿಯುವ ನೀರು ಘಟಕ ಕಾರ್ಯ ಆರಂಭ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.ಮನ್ಮುಲ್ ಅಧ್ಯಕ್ಷ ಎಂ.ಕೆ.ಹರೀಶ್ ಬಾಬು ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟದಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣದ ಜೊತೆಗೆ ಐಸ್ ಕ್ರೀಮ್ ತಯಾರಿಕಾ ಘಟಕ ನಿರ್ಮಾಣಕ್ಕೂ ಚಿಂತನೆ ನಡೆಸಲಾಗಿದೆ. ಸರ್ಕಾರ ಮತ್ತು ಕೆಎಂಎಫ್ ಅನುಮೋದನೆ ದೊರೆತ ನಂತರ ಐಸ್ ಕ್ರೀಮ್ ಘಟಕ ನಿರ್ಮಾಣ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರದ ನಾಮನಿರ್ದೇಶಕ ಅಣ್ಣೂರು ರಾಜೀವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಂಜೇಶ್, ಉಪ ವ್ಯವಸ್ಥಾಪಕ ಡಾ. ಹೊನ್ನೇಶ್, ಸಹಾಯಕ ವ್ಯವಸ್ಥಾಪಕ ಗೋವರ್ಧನ್, ವಿಸ್ತರಣಾಧಿಕಾರಿಗಳಾದ ಹರೀಶ ಹೆಗ್ಗಡೆ, ದಿಲ್ವಾರ್, ದೀಪಕ್, ಅನ್ವರ್ ಮತ್ತಿತರರು ಭಾಗವಹಿಸಿದ್ದರು