ತುಮಕೂರಿನಲ್ಲಿ ಸ್ವಚ್ಛೋತ್ಸವಕ್ಕೆ ಶಾಸಕ ಜ್ಯೋತಿ ಗಣೇಶ್ ಚಾಲನೆ

| Published : Sep 19 2025, 01:00 AM IST

ತುಮಕೂರಿನಲ್ಲಿ ಸ್ವಚ್ಛೋತ್ಸವಕ್ಕೆ ಶಾಸಕ ಜ್ಯೋತಿ ಗಣೇಶ್ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆ. 17 ರಿಂದ ಅ. 17 ರವರೆಗೆ ಒಂದು ತಿಂಗಳ ಕಾಲ ಈ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಎಂದರು.

ಕನ್ನಡಪ್ರಭ ವಾರ್ತೆ ತುಮಕೂರು ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಒಂದು ತಿಂಗಳ ಕಾಲ ನಗರದ ವಿವಿಧ ವಾರ್ಡ್‌ಗಳಲ್ಲಿ ಹಮ್ಮಿಕೊಂಡಿರುವ ಸ್ವಚ್ಛೋತ್ಸವಕ್ಕೆ ಚಾಲನೆ ನೀಡಲಾಯಿತು.ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಸೇರಿದಂತೆ ಪಾಲಿಕೆ ಅಧಿಕಾರಿಗಳು ಕಸ ಗುಡಿಸಿ, ಸ್ವಚ್ಛತೆ ಕಾರ್ಯದ ಮೂಲಕ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಮಾತನಾಡಿದ ಶಾಸಕ ಜ್ಯೋತಿ ಗಣೇಶ್ ಅವರು, ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಮಹಾತ್ಮ ಗಾಂಧೀಜಿಯವರ ಜಯಂತಿ ಅಂಗವಾಗಿ ದೇಶಾದ್ಯಂತ ನಡೆಯುತ್ತಿದೆ. ಅದರ ಅಂಗವಾಗಿ ಸೆ. 17 ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಿಂದಲೇ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆ. 17 ರಿಂದ ಅ. 17 ರವರೆಗೆ ಒಂದು ತಿಂಗಳ ಕಾಲ ಈ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಎಂದರು.ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಗಾಗಿ ನಾವು ವಾಸಿಸುತ್ತಿರುವ ಮನೆಯ ಸುತ್ತಮುತ್ತ ಸೇರಿದಂತೆ ತುಮಕೂರು ನಗರದ ಸ್ವಚ್ಛತೆ ಕಾಪಾಡಬೇಕಾದ್ದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದರು.ಈಗಾಗಲೇ ಮಹಾನಗರ ಪಾಲಿಕೆ ವತಿಯಿಂದ ಪ್ರತಿ ಮನೆ ಬಾಗಿಲಿಗೂ ಹೋಗಿ ಕಸ ಸಂಗ್ರಹಿಸುವ ಮೂಲಕ ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯವನ್ನು ಬೇರ್ಪಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ನಮ್ಮ ನಗರವನ್ನು ಸ್ವಚ್ಛ ನಗರವಾಗಿ ಇಟ್ಟುಕೊಳ್ಳಬೇಕು. ಹಾಗಾಗಿ ಸ್ವಚ್ಛೋತ್ಸವಕ್ಕೆ ಪಾಲಿಕೆ ವತಿಯಿಂದ ಚಾಲನೆ ನೀಡಲಾಗಿದೆ ಎಂದರು. ನಮ್ಮ ಮನೆಗಳನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತೆವೋ ಅದೇ ರೀತಿ ತುಮಕೂರು ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಮ್ಮ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಲು ಬದಲಾವಣೆ ಬರಬೇಕು. ಪೌರ ಕಾರ್ಮಿಕರು ಸಹ ಮನುಷ್ಯರೇ. ಅವರು ಎಷ್ಟು ಸ್ವಚ್ಛ ಮಾಡಲಿಕ್ಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು. ಆಗ ಮಾತ್ರ ತುಮಕೂರು ಸ್ವಚ್ಛ ಸುಂದರ ನಗರವಾಗಿ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಮಾತನಾಡಿ, ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಒಂದು ತಿಂಗಳ ಕಾಲ ನಡೆಯುವ ಸ್ವಚ್ಛೋತ್ಸವಕ್ಕೆ ಚಾಲನೆ ನೀಡಲಾಗಿದೆ. ಪ್ರಧಾನ ಮಂತ್ರಿಯವರ ಹುಟ್ಟುಹಬ್ಬದ ದಿನವಾದ ನಿನ್ನೆಯಿಂದಲೇ ಪಾಲಿಕೆಯ ಅಧಿಕಾರಿಗಳು ವಿವಿಧ ವಾರ್ಡ್ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ ಎಂದರು.ಸೆ. 17 ರಿಂದ ಅ. 17 ರ ವರೆಗೆ ಒಂದು ತಿಂಗಳ ಈ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದ್ದು, ನಗರದ ವಿವಿಧ ವಾರ್ಡ್‌ಗಳಲ್ಲಿ ಶಾಲೆಯ ಆವರಣ, 200 ಬ್ಲಾಕ್ ಸ್ಪಾಟ್ಸ್‌ಗಳ ಸ್ವಚ್ಛತೆ, ರಸ್ತೆಗಳಲ್ಲಿ ಸ್ವಚ್ಛತೆ. ಪ್ಲಾಂಟೇಷನ್ ಸ್ವಚ್ಛತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನಸಂದಣಿ ಎಲ್ಲೆಲ್ಲಿ ಜಾಸ್ತಿ ಇರುತ್ತದೆಯೋ ಅಲ್ಲೆಲ್ಲಾ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿನಿತ್ಯ ಒಂದು ತಿಂಗಳ ಕಾಲ ವಿವಿಧ ವಾರ್ಡ್ಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಯೋಗೇಶ್, ಪರಿಸರ ಅಭಿಯಂತರರಾದ ಪೂರ್ಣೀಮ, ನಿಖಿತಾ, ಆರೋಗ್ಯ ನಿರೀಕ್ಷಕರಾದ ಮನೋಹರ್, ಪ್ರಸನ್ನ, ಚೂಡಾಮಣಿ, ಕೆಎಸ್ಸಾರ್ಟಿಸಿಯ ಡಿಎಂಇ ಆಸೀಫುಲ್ಲಾ ಷರೀಫ್, ಡಿಟಿಓ ಮಂಜುನಾಥ್, ಪೌರ ಕಾರ್ಮಿಕರು ಮತ್ತಿತರರು ಪಾಲ್ಗೊಂಡಿದ್ದರು.