ಸರ್ಕಾರದಿಂದಲೂ ಅಗತ್ಯ ಸಹಕಾರ ನೀಡಲು ಶ್ರಮಿಸುತ್ತೇನೆ
ಕನ್ನಡಪ್ರಭ ವಾರ್ತೆ ಮೈಸೂರು
ಯಾವುದೇ ಸಮುದಾಯದ ಅಭಿವೃದ್ಧಿಗೆ ಶಿಕ್ಷಣದ ತಳಹದಿ ಅತ್ಯಂತ ಪ್ರಮುಖ ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.ನಗರದ ಗಂಗೋತ್ರಿ ಬಡಾವಣೆಯಲ್ಲಿನ ನಾಮಧಾರಿಗೌಡ ಸಂಘದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಾಮಧಾರಿಗೌಡ ಸಂಘ ಮೈಸೂರು ನಗರ ವಲಯವು ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಂತೋಷಕೂಟವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನಾಮಧಾರಿಗೌಡ ಸಂಘವು ನಗರದಲ್ಲಿ ವಿದ್ಯಾರ್ಥಿನಿ ನಿಲಯ ಸ್ಥಾಪನೆಗೆ ಮುಂದಾಗಿದ್ದು, ಶಾಸಕರ ಅನುದಾನದಿಂದ 15 ಲಕ್ಷ ಹಾಗೂ ವೈಯಕ್ತಿಕವಾಗಿ 10 ಲಕ್ಷ ಸಹಕಾರ ನೀಡುತ್ತೇನೆ. ಸಿಎ ಸಿವೇಶನ ಹೊಂದುವುದಕ್ಕೂ ಸೂಕ್ತ ವ್ಯವಸ್ಥೆ ಮಾಡಲಾಗವುದು ಎಂದು ಅವರು ಭರವಸೆ ನೀಡಿದರು.ಸಮುದಾಯವು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಆಶಯ. ಸರ್ಕಾರದಿಂದಲೂ ಅಗತ್ಯ ಸಹಕಾರ ನೀಡಲು ಶ್ರಮಿಸುತ್ತೇನೆ ಎಂದು ಅವರು ಹೇಳಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ನಾಮಧಾರಿಗೌಡ ಸಮುದಾಯವು ದೀರ್ಘ ಪರಂಪರೆಯನ್ನು ಹೊಂದಿದೆ. ದೇಶದಲ್ಲಿ ಪ್ರತಿ ಸಮುದಾಯಗಳು ತಮ್ಮದೇ ಆದ ಇತಿಹಾಸವನ್ನು ಹೊಂದಿದ್ದು, ಅದನ್ನು ದಾಖಲಿಸುವ ಕೆಲಸವಾಗದಿರುವುದು ಬೇಸರದ ಸಂಗತಿ. ದೇಶದ ಸಂಸ್ಕೃತಿ, ಇತಿಹಾಸದಲ್ಲಿ ಸಮುದಾಯಗಳ ಹಿನ್ನೆಲೆ ಅರಿಯುವುದು ಅಗತ್ಯ. ಅದನ್ನೂ ಹೆಮ್ಮೆಯಿಂದ ಅರಿಯಬೇಕು, ರಕ್ಷಿಸಬೇಕು ಎಂದರು.ಸಂಘದ ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಅಗತ್ಯ ಸಿಎ ನಿವೇಶನ ಹೊಂದಲು ಸಂಸದರ ನಿಧಿಯಿಂದ ಸೂಕ್ತ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.
ಸಂಘದ ಗೌರವ ಅಧ್ಯಕ್ಷ ಎಂ. ರಾಜಶೇಖರ್ ಮಾತನಾಡಿ, ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸಲು ರಾಜ್ಯ ಸರ್ಕಾರವು ಒತ್ತಾಯಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳೂ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ಸಮುದಾಯದ 29 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಶಾಸಕ ಟಿ.ಎಸ್.ಶ್ರೀವತ್ಸ ನೀಡಿದರು. ನಂತರ ಲೇಖಕ ಪ್ರೊ. ಲೋಹಿತಾಶ್ವ ಹುಲ್ಲಟ್ಟಿ, ನಿವೃತ್ತ ಅಧಿಕಾರಿ ಎಂ.ಎನ್. ನಟರಾಜ್ ಹಾಗೂ 16 ಮಾಜಿ ಸೈನಿಕರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 8 ಮಂದಿಯನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಎಂ.ಎನ್. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಎಚ್.ಕೆ. ವೆಂಕಟೇಶ್, ಖಜಾಂಚಿ ಎಂ.ಎನ್. ಜಯಕುಮಾರ್, ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಕೆ.ಟಿ. ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಸಿ.ಎನ್. ವೇಣುಗೋಪಾಲ್ ಮೊದಲಾದವರು ಇದ್ದರು.