ಪ್ರತ್ಯೇಕ ಉ. ಕರ್ನಾಟಕ ರಾಜ್ಯಕ್ಕಾಗಿಮುರ್ಮು, ಮೋದಿಗೆ ಶಾಸಕ ಕಾಗೆ ಪತ್ರ

| Published : Nov 13 2025, 12:45 AM IST

ಪ್ರತ್ಯೇಕ ಉ. ಕರ್ನಾಟಕ ರಾಜ್ಯಕ್ಕಾಗಿಮುರ್ಮು, ಮೋದಿಗೆ ಶಾಸಕ ಕಾಗೆ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಗವಾಡದ ಕಾಂಗ್ರೆಸ್‌ ಶಾಸಕ ಭರಂಗೌಡ (ರಾಜು) ಕಾಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಘೋಷಣೆ ಮಾಡುವಂತೆ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕರ್ನಾಟಕ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ರಾಜ್ಯ ಕೂಗು ಕೇಳಿಬಂದಿದೆ. ಕಾಗವಾಡದ ಕಾಂಗ್ರೆಸ್‌ ಶಾಸಕ ಭರಂಗೌಡ (ರಾಜು) ಕಾಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಘೋಷಣೆ ಮಾಡುವಂತೆ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕರ್ನಾಟಕ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ನೀರಾವರಿ, ಶಿಕ್ಷಣ, ಆರೋಗ್ಯ, ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಎಲ್ಲ ಸರ್ಕಾರಗಳು ಅನ್ಯಾಯ ಮಾಡಿವೆ. ಹಾಗಾಗಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ನೀಡುವಂತೆ ಅವರು ಆಗ್ರಹಿಸಿದ್ದಾರೆ. ರಾಷ್ಟ್ರಪತಿಗಳಿಗೆ ನ.4ರಂದೇ ಅವರು ಪತ್ರ ರವಾನಿಸಿದ್ದಾರೆ.

ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಬೆಳಗಾವಿ ಅಧಿವೇಶನದಲ್ಲಿ ಕೇಳುತ್ತೇನೆ ಎಂದೂ ಹೇಳಿರುವ ಅವರು, ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಪ್ರತಿ ಸರ್ಕಾರವೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಸಗಿವೆ. ಹಾಗಾಗಿ ಪ್ರತ್ಯೇಕ ರಾಜ್ಯ ರಚನೆಗಾಗಿ ಸಹಿ ಸಂಗ್ರಹ ಮಾಡುತ್ತಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದಿದ್ದಾರೆ.

ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕಾಗೆ, 15 ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಮಾಡಬೇಕು. ಆಡಳಿತದ ಅನುಕೂಲಕ್ಕಾಗಿ ಹಾಗೂ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬೀದರ್‌, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ಹಾವೇರಿ, ವಿಜಯನಗರ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳನ್ನು ಸೇರಿಸಿ ಹೊಸ ರಾಜ್ಯ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಜಿಲ್ಲೆಗಳು ನಿರಂತರವಾಗಿ ಅನ್ಯಾಯಕ್ಕೆ ಒಳಗಾಗಿವೆ. ಅಭಿವೃದ್ಧಿ ವಿಚಾರ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಈ ಜಿಲ್ಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ದೂರಿದ್ದಾರೆ.

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಯಿಂದ ಮತ್ತೊಂದು ಹೆಮ್ಮೆಯ ಕನ್ನಡ ಭಾಷೆ ಮಾತನಾಡುವ ರಾಜ್ಯ ರಚನೆ ಮಾಡಿದಂತೆ ಆಗುತ್ತದೆ. ಉತ್ತರ ಕರ್ನಾಟಕ ಅಗಾಧ ಸಂಪನ್ಮೂಲ ಹೊಂದಿರುವ ಪ್ರದೇಶ. ಈ ಮೂಲಕ ಕನ್ನಡ ಭಾಷೆ ಮತ್ತು ಏಕೀಕೃತ ಕರ್ನಾಟಕಕ್ಕೆ ಬಹಳಷ್ಟು ಕೊಡುಗೆ ನೀಡುತ್ತಿವೆ ಎಂದು ರಾಜು ಕಾಗೆ ಹೇಳಿದ್ದಾರೆ.ಇನ್ನು ಪ್ರತ್ಯೇಕ ರಾಜ್ಯ ರಚನೆಗಾಗಿ ಸಹಿ ಸಂಗ್ರಹಿಸುತ್ತಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿಗೆ ಶಾಸಕರು ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಅಲ್ಲದೆ ಈಗಾಗಲೇ ಸಮಿತಿಯು 1 ಕೋಟಿ ಜನರ ಸಹಿ ಸಂಗ್ರಹಿಸಿದೆ. ಎಲ್ಲ ವರ್ಗದ ಜನರು ಕೂಡ ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ಮನವಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ರಾಜ್ಯ ಘೋಷಣೆಗಾಗಿ ಶಿಫಾರಸು ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.ಇದೇ ಬೇಡಿಕೆ ಇಟ್ಟು ಇದೇ ವರ್ಷದ ಜನವರಿ 3 ಮತ್ತು ಪ್ರಧಾನ ಮಂತ್ರಿಗಳ ಕಚೇರಿಗೆ ಜನವರಿ 5ರಂದು ಜ್ಞಾಪಕ ಪತ್ರ ನೀಡಿದ್ದೇನೆ ಎಂದು ರಾಜು ಕಾಗೆ ತಿಳಿಸಿದ್ದಾರೆ.ಅಲ್ಲದೆ ಬುಧವಾರ ಕಾಗವಾಡದಲ್ಲಿ ಮಾತನಾಡಿದ ಅವರು, ಮುಂದಿನ ಡಿಸೆಂಬರ್‌ ತಿಂಗಳಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಜರುಗಲಿರುವ ವಿಧಾನಸಭೆ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವೆ. ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ಈ ವಿಷಯದಲ್ಲಿ ರಾಜಕೀಯವೇನೂ ಇಲ್ಲ. ಯಾವುದೇ ಸರ್ಕಾರ ಬಂದರೂ ಉತ್ತರ ಕರ್ನಾಟಕಕ್ಕೆ ಅನುದಾನ, ಅಭಿವೃದ್ಧಿ ಹಾಗೂ ರಾಜಕೀಯ ವಿಚಾರವಾಗಿಯೂ ಅನ್ಯಾಯ ಮಾಡುತ್ತಿವೆ. ದಿ.ಉಮೇಶ ಕತ್ತಿ ಬಳಿಕ ನಾನೂ ಕೂಡ ಹಿರಿಯ ರಾಜಕೀಯ ನಾಯಕ. ಆದ್ದರಿಂದ ಪ್ರತ್ಯೇಕ ರಾಜ್ಯದ ಕೂಗು ಎತ್ತುವುದು ಆಶ್ಚರ್ಯಕರವೇನಲ್ಲ ಎಂದು ಸಮರ್ಥಿಸಿಕೊಂಡರು.