ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ತಮ್ಮನ್ನು ಅವಮಾನಿಸಿದ್ದಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಆರೋಪಿಸಿ, ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಗುಡುಗಿದರು.ಮಂಗಳವಾರ ನಡೆದ ಅಧಿವೇಶನದಲ್ಲಿ ಮಾತನಾಡಿದ ಶಾಸಕ ರಾಜು ಕಾಗೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯನಾಗಿ ನನಗೆ ರಾಜೇಂದ್ರ ಕಠಿಯಾರ ಅವಮಾನಿಸಿದ್ದಾರೆ. ಕಾಗವಾಡದಲ್ಲಿ ಪ್ರಜಾಸೌಧ ನಿರ್ಮಾಣದ ಕುರಿತು ಚರ್ಚೆ ನಡೆಸುವ ವೇಳೆ ಅಲ್ಲಿ ಕರೆದಿದ್ದ ಜಿಲ್ಲಾಧಿಕಾರಿಗಳು ಮತ್ತು ತಮಗೂ ತಲೆಯಿಲ್ಲ ಎಂದು ಹೇಳುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ. ಈಗಾಗಲೇ 60ಕ್ಕೂ ಹೆಚ್ಚು ಶಾಸಕರು ಇವರ ವಿರುದ್ಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಇಲ್ಲವೇ ಅಮಾನತು ಮಾಡಿ ಎಂದು ಹಕ್ಕು ಚ್ಯುತಿ ಮಂಡಿಸುತ್ತೇನೆ ಎಂದರು.ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಶಾಸಕ ಸಿ.ಸಿ.ಪಾಟೀಲ ಇದ್ದ ಸಭೆಯಲ್ಲಿ ಹಗುರವಾಗಿ ಮಾತನಾಡಿ ನನಗೆ ಮಾತ್ರವಲ್ಲದೇ ಇನ್ನೂ ಅನೇಕ ಶಾಸಕರ ಜತೆಗೆ ಸಹ ಇದೇ ರೀತಿಯಾಗಿ ವರ್ತಿಸಿ, ದುರಹಂಕಾರ ತೋರುತ್ತಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ಸುಮಾರು 60 ಜನ ಶಾಸಕರು ಸಹಿ ಮಾಡಿದ್ದು, ಅವರ ವಿರುದ್ಧದ ಹಕ್ಕುಚ್ಯುತಿಗೆ ಬೆಂಬಲ ಸೂಚಿಸಿದ್ದಾರೆ. ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.ಅದಕ್ಕೆ ಬಿಜೆಪಿಯ ಶಾಸಕ ಸಿ.ಸಿ.ಪಾಟೀಲ ಕೂಡ ಸಾಥ್ ನೀಡಿದ್ದು, ರಾಜೇಂದ್ರ ಕಟಾರಿಯಾ ಅವರ ವರ್ತನೆ ಅಸಹಜವಾಗಿದ್ದು, ರಾಜು ಕಾಗೆ ಅವರಿಗೆ ಏರು ಧ್ವನಿಯಲ್ಲಿ ಅವಮಾನಿಸಿದ್ದು ತಪ್ಪು. ಈಗಾಗಲೇ ಸುಮಾರು 60ಕ್ಕೂ ಹೆಚ್ಚು ಶಾಸಕರು ರಾಜೇಂದ್ರ ಕಠಿಯಾರ ವಿರುದ್ಧ ದೂರು ನೀಡಿದ್ದು, ಅವರ ಹಕ್ಕುಚ್ಯುತಿ ಮಂಡಿಸಲು ನಮ್ಮ ಬೆಂಬಲವಿದೆ ಎಂದು ತಿಳಿಸಿದರು.ಇದೇ ವೇಳೆ ವಿಪಕ್ಷ ನಾಯಕ ಆರ್.ಅಶೋಕ, ಶಾಸಕರಾದ ಅರವಿಂದ ಬೆಲ್ಲದ, ಬಸನಗೌಡ ಪಾಟೀಲ (ಯತ್ನಾಳ) ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಕಾನೂನು ಮೀರಿ ಕೆಲಸ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಕೊಳ್ಳಬೇಕು ಎಂದು ಒತ್ತಾಯಿಸಿದರು. ಇನ್ನು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ಅವರು ಸಲಹೆ ಸೂಚನೆಗಳನ್ನು ನೀಡಿದರು. ನಂತರ ಸಭಾಪತಿ ಯು.ಟಿ.ಖಾದರ ಅವರು ಈ ಕುರಿತು ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.ಮಂಗಳವಾರ ವಿಧನ ಮಂಡಲದಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಅವರು ತಮ್ಮನ್ನು ಅವಮಾನಿಸಿದ ಕಂದಾಯ ಇಲಾಖೆಯ ಕಾರ್ಯದರ್ಶಿರಾಜೇಂದ್ರ ಕಟಾರಿಯಾ ಅವರ ವಿರುದ್ಧ ಹಕ್ಕುಚ್ಯುತಿಯನ್ನು ಮಂಡಿಸಿದರು.