ಕಣ್ಣೂರು ವಾರ್ಡಿನ ಬಲ್ಲೂರ್ ಗುಡ್ಡೆ ಪ್ರದೇಶದಲ್ಲಿ ಸುಮಾರು 27 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ರಸ್ತೆಯನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಲೋಕಾರ್ಪಣೆಗೊಳಿಸಿದರು.
ಮಂಗಳೂರು: ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ ಕಳೆದ 50 ವರ್ಷಗಳಿಂದ ರಸ್ತೆ ಸಂಪರ್ಕವಿಲ್ಲದೆ ಪರಿತಪಿಸುತ್ತಿದ್ದ ಕಣ್ಣೂರು ವಾರ್ಡಿನ ಬಲ್ಲೂರ್ ಗುಡ್ಡೆ ಪ್ರದೇಶದಲ್ಲಿ ಸುಮಾರು 27 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ರಸ್ತೆಯನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಶಾಸಕರು, ರೈಲ್ವೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಿರಲಿಲ್ಲ. ರಸ್ತೆಯೇ ಇಲ್ಲದೆ ಇಲ್ಲಿನ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದ ಬಗ್ಗೆ ಅದರಲ್ಲೂ ಮಳೆಗಾಲದಲ್ಲಿ ಪರಿಸ್ಥಿತಿ ಅಸಹನೀಯ ಮಟ್ಟಕ್ಕೆ ಹೋಗುತ್ತಿದ್ದುದನ್ನು ಕಣ್ಣಾರೆ ಕಂಡ ಬಳಿಕವಂತೂ ಸುಮ್ಮನಿರಲು ಸಾಧ್ಯವಾಗಲಿಲ್ಲ. ಹಲವು ವಿಶೇಷ ಸಭೆಗಳ ಸಹಿತ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಅನೇಕ ಬಾರಿ ಸ್ಥಳಕ್ಕೆ ಕರೆಸಿ ಪರಿಸ್ಥಿತಿಯನ್ನು ವಿವರಿಸಲಾಗಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನವೇ ಇಲ್ಲದಿದ್ದರೂ ಸತತ ಪ್ರಯತ್ನದ ಫಲವಾಗಿ ಈ ರಸ್ತೆ ನಿರ್ಮಾಣಗೊಂಡಿರುವುದು ಸಂತಸವಾಗಿದೆ ಎಂದರು.ನಿಕಟಪೂರ್ವ ಪಾಲಿಕೆ ಸದಸ್ಯೆ ಚಂದ್ರಾವತಿ ವಿಶ್ವನಾಥ್ ಮಾತನಾಡಿ, ನಮ್ಮೆಲ್ಲರ ನಿರಂತರ ಮನವಿಗೆ ಸ್ಪಂದಿಸಿದ ಶಾಸಕರಿಗೆ ಸ್ಥಳೀಯರ ಪರವಾಗಿ ಕೋಟಿ ವಂದನೆಗಳು ಎಂದರು.
ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಶ್ವನಾಥ್ ಕೊಡಕ್ಕಲ್, ಭಾಸ್ಕರ ಚಂದ್ರ ಶೆಟ್ಟಿ, ಮೋಹನ್ ಪೂಜಾರಿ, ನಿಲೇಶ್ ಕಾಮತ್, ಪ್ರವೀಣ್ ನಿಡ್ಡೇಲ್, ವರುಣ್ ಅಂಬಟ್, ಮಹಮ್ಮದ್ ಇಕ್ಬಾಲ್, ಮಹಮ್ಮದ್ ಶಾಕೀರ್, ಕಬೀರ್ ಬಲ್ಲೂರು ಗುಡ್ಡೆ, ದೇವದಾಸ ಶೆಟ್ಟಿ ಕೊಡಕ್ಕಲ್, ಸುನಿಲ್ ಕೊಡಕ್ಕಲ್, ಅನ್ಸರ್ ಕುಂದಾಲ್ ಮತ್ತಿತರರಿದ್ದರು.