ಸಿದ್ದು ಕೆಳಗಿಳಿಸಲು ಶಾಸಕ ಕೋಳಿವಾಡ ಹುನ್ನಾರ

| Published : Nov 23 2025, 02:45 AM IST

ಸಾರಾಂಶ

ಅಹಿಂದ ಮತಗಳಿಂದ ಆಯ್ಕೆಯಾಗಿರುವೆ ಹಾಗೂ ನಾನು ಸದಾ ಅಹಿಂದ ಪರವೆಂದು ಹೇಳಿಕೊಳ್ಳುವ ಸ್ಥಳೀಯ ಕಾಂಗ್ರೆಸ್‌ ಶಾಸಕ ಪ್ರಕಾಶ ಕೋಳಿವಾಡ ಅಹಿಂದ ಮುಖಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಅರುಣಕುಮಾರ ಪೂಜಾರ ಗಂಭೀರ ಆರೋಪ ಮಾಡಿದರು.

ರಾಣಿಬೆನ್ನೂರು: ಅಹಿಂದ ಮತಗಳಿಂದ ಆಯ್ಕೆಯಾಗಿರುವೆ ಹಾಗೂ ನಾನು ಸದಾ ಅಹಿಂದ ಪರವೆಂದು ಹೇಳಿಕೊಳ್ಳುವ ಸ್ಥಳೀಯ ಕಾಂಗ್ರೆಸ್‌ ಶಾಸಕ ಪ್ರಕಾಶ ಕೋಳಿವಾಡ ಅಹಿಂದ ಮುಖಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಅರುಣಕುಮಾರ ಪೂಜಾರ ಗಂಭೀರ ಆರೋಪ ಮಾಡಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಕೋಳಿವಾಡ ಸಿದ್ದರಾಮಯ್ಯ ವಿರೋಧಿ ಗುಂಪಿನಲ್ಲಿ ಸೇರಿಕೊಂಡಿದ್ದಾರೆ ಎಂದರು.

ಮೆಕ್ಕೆಜೋಳಕ್ಕೆ ಬೆಂಬಲ ಘೋಷಣೆ ಹಾಗೂ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ನಗರದಲ್ಲಿ ನಮ್ಮ ಪಕ್ಷದ ವತಿಯಿಂದ ನ.17ರಂದು ನಡೆಸಿದ ಹೋರಾಟ ಯಶಸ್ವಿಯಾಗಿದೆ. ಇದರಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಖರೀದಿ ಕೇಂದ್ರ ತೆರೆಯುವ ಭರವಸೆ ನೀಡಿದ್ದಾರೆ. ನಿರುದ್ಯೋಗ ಮುಕ್ತ ರಾಣಿಬೆನ್ನೂರು ಮಾಡಲು ಕೈಗಾರಿಕೆ ಸ್ಥಾಪಿಸಲು ಶಾಸಕರು ಮುಂದಾಗಬೇಕು.

ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಜವಳಿ ಇಲಾಖೆ ಮೂಲಕ ಬಡ ಸಂಗಾಪುರ ಬಳಿ ಜವಳಿ ಪಾರ್ಕ್ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಇದರ ಬಗ್ಗೆ ಗಮನ ಹರಿಸಿ ಅದು ಕಾರ್ಯರೂಪಕ್ಕೆ ಬರುವಂತೆ ಮಾಡಬೇಕು. ಹೀಗಾದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಾಯವಾಗಲಿದೆ. ನಗರಸಭೆಯ ಸದಸ್ಯರ ಅಧಿಕಾರ ಮುಗಿದ ನಂತರ ವಾಣಿಜ್ಯ ಮಳಿಗೆಗಳ ತೆರವಿಗೆ ನೋಟಿಸ್ ನೀಡಲಾಗಿದೆ. ವರ್ತಕರು ಸರ್ಕಾರಕ್ಕೆ ಹಣವನ್ನು ತುಂಬಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ಹಣ ನೀಡಬಾರದು ಎಂದರು. ನಗರಸಭೆ ಮಾಜಿ ಸದಸ್ಯ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ಶಾಸಕ ಪ್ರಕಾಶ ಕೋಳಿವಾಡ ಅವರು ಅಹಿಂದ ನಾಯಕ ಎಂದು ಹೇಳುತ್ತಿದ್ದು, ವಾರದಿಂದ ಕ್ಷೇತ್ರದಿಂದ ಕಾಣೆಯಾಗಿದ್ದಾರೆ. ಅನೇಕ ಅಭಿವೃದ್ಧಿ ಕೆಲಸಗಳಿಗೆ ಕುಂಠಿತಗೊಳಿಸಿದ್ದಾರೆ. ನಗರದಲ್ಲಿ ನಗರಸಭೆ ಮಾಲ್ಕಿ ಮಳಿಗೆ ಮಾಲೀಕರಿಗೆ ನೋಟಿಸ್ ಜಾರಿಮಾಡಲಾಗಿದೆ. ನಗರದಲ್ಲಿನ 964 ಮಳಿಗೆಗಳ ಪೈಕಿ 36 ಮಳಿಗೆಗಳನ್ನು ಹೊರತುಪಡಿಸಿ ಉಳಿದ ಮಳಿಗೆಗಳಿಗೆ ನೋಟಿಸ್ ನೀಡಲಾಗಿದ್ದು, ಮರುಹರಾಜು ಮಾಡಬೇಕು. ಯಾವುದೇ ಮಧ್ಯವರ್ತಿಗಳ ಮೂಲಕ ಹಣ ವಸೂಲಿ ಮಾಡಿದರೆ ಹೋರಾಟ ಮಾಡಲಾಗುವುದು ಹಾಗೂ ಲೋಕಾಯುಕ್ತ ತನಿಖೆಗೆ ದೂರು ನೀಡಲಾಗುವುದು ಎಂದರು.ಬಿಜೆಪಿ ಶಹರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ, ಎ.ಬಿ. ಪಾಟೀಲ, ಚೋಳಪ್ಪ ಕಸವಾಳ, ಸಿದ್ದು ಚಿಕ್ಕಬಿದರಿ, ಬಸಣ್ಣ ಹುಲ್ಲತ್ತಿ, ಪವನಕುಮಾರ ಮಲ್ಲಾಡದ, ಪ್ರಕಾಶ ಪೂಜಾರ, ಮಲ್ಲಿಕಾರ್ಜುನ ಅಂಗಡಿ, ಶ್ರೀನಿವಾಸ ಜಡಮಲಿ ಸುದ್ದಿಗೋಷ್ಠಿಯಲ್ಲಿದ್ದರು.