ನವಲಗುಂದ ಪಟ್ಟಣದ ಮಾಡೆಲ್‌ ಹೈಸ್ಕೂಲ್‌ ಮೈದಾನದ 4 ಎಕರೆ ಜಾಗೆಯಲ್ಲಿ ಸಾಮೂಹಿಕ ವಿವಾಹ ನಡೆಯಲಿದ್ದು ಮುಖ್ಯ ವೇದಿಕೆ ಸಿದ್ಧಗೊಳ್ಳುತ್ತಿದೆ. 10 ಎಕರೆ ಪ್ರದೇಶದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸಿದ್ಧತೆ ಭರದಿಂದ ನಡೆದಿದೆ. 26 ಎಕರೆಯಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ನವಲಗುಂದ:

ಪಟ್ಟಣದ ಮಾಡೆಲ್‌ ಹೈಸ್ಕೂಲ್‌ ಮೈದಾನದಲ್ಲಿ ಡಿ. 7ರಂದು ಆಯೋಜಿಸಿರುವ 75 ಜೋಡಿ ಸರ್ವ-ಧರ್ಮದ ಉಚಿತ ಸಾಮೂಹಿಕ ವಿವಾಹದಲ್ಲಿ ಶಾಸಕ ಎನ್‌.ಎಚ್‌. ಕೋನರಡ್ಡಿ ಪುತ್ರ ನವೀನಕುಮಾರ ಆರತಕ್ಷತೆ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ವಧು- ವರರಿಗೆ ತಾಳಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಗುರುವಾರ ವಿತರಿಸಲಾಯಿತು.

ಮಾಡೆಲ್‌ ಹೈಸ್ಕೂಲ್‌ ಮೈದಾನದ 4 ಎಕರೆ ಜಾಗೆಯಲ್ಲಿ ಸಾಮೂಹಿಕ ವಿವಾಹ ನಡೆಯಲಿದ್ದು ಮುಖ್ಯ ವೇದಿಕೆ ಸಿದ್ಧಗೊಳ್ಳುತ್ತಿದೆ. 10 ಎಕರೆ ಪ್ರದೇಶದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸಿದ್ಧತೆ ಭರದಿಂದ ನಡೆದಿದೆ. 26 ಎಕರೆಯಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಇಡೀ ಪಟ್ಟಣವೇ ಸಿಂಗಾರಗೊಳ್ಳುತ್ತಿದೆ. ಸಾಮೂಹಿಕ ವಿವಾಹದ ಹಿನ್ನೆಲೆಯಲ್ಲಿ ವಧು-ವರರಿಗೆ ತಾಳಿ, ಕಾಲುಂಗುರ, ಬಟ್ಟೆ, ಸೀರೆ, ಟ್ರೆಜರಿ, ಪಲ್ಲಂಗ ಸೇರಿದಂತೆ ಮತ್ತಿತರರ ಸಾಮಗ್ರಿಗಳನ್ನು ಪಟ್ಟಣದ ಫಾರ್ಮ್‌ ಹೌಸ್‌ನಲ್ಲಿ ಶಾಸಕ ಎನ್‌.ಎಚ್‌. ಕೋನರಡ್ಡಿ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, 2005-06ರಿಂದ ಸಾಮೂಹಿಕ ವಿವಾಹ ಮಾಡುತ್ತಾ ಬಂದಿದ್ದು, ಇದೀಗ ಪುತ್ರ ನವೀನ ಮದುವೆಯ ಆರತಕ್ಷತೆ ಹಿನ್ನೆಲೆಯಲ್ಲಿ 75 ಜೋಡಿ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ ಎಂದರು.

ಅಂದಿನ ಸರ್ವ-ಧರ್ಮದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ರಾಜ್ಯದ ಸಚಿವರು, ಶಾಸಕರು, ವಿಪ ಸದಸ್ಯರು ಹಾಗೂ ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಂಡು ವಧು-ವರರಿಗೆ ಆಶೀರ್ವದಿಸಲಿದ್ದಾರೆ ಎಂದ ಅವರು, ಇದಕ್ಕಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ, ಭದ್ರತೆ ಸಲುವಾಗಿ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ, ಡಿಎಸ್‌ಪಿ ವಿನಾಯಕ ಗುತ್ತೆದಾರ, ಶಿವಾನಂದ ಕಟಗಿ, ಸಿಪಿಐ ರವಿ ಕಪ್ಪತ್ತನವರ, ಪಿಎಸ್‌ಐ ಜನಾರ್ಧನ ಬಿ, ತಹಸೀಲ್ದಾರ್ ಸುಧೀರ ಸಾವಕಾರ ಬಂದೋಬಸ್ತ್‌ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.

ಮುರಗಯ್ಯಜ್ಜ ವಿರಕ್ತಮಠ ಹಾಗೂ ಸಲಿಂ ಖಾಜಿ ಸಾನ್ನಿಧ್ಯ ವಹಿಸಿದ್ದರು. ಸರ್ವಧರ್ಮ ಸಾಮೂಹಿಕ ಸಮಿತಿಯ ಅಧ್ಯಕ್ಷ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ನವಲಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೆವಾಡಿ, ಪುರಸಭೆ ಸದಸ್ಯರಾದ ಜೀವನ ಪವಾರ, ಶಿವಾನಂದ ತಡಸಿ, ಮಂಜು ಜಾಧವ, ಅಪ್ಪಣ್ಣ ಹಳ್ಳದ, ಫರೀದಾಬೇಗಂ ಉಸ್ಮಾನಸಾಬ ಬಬರ್ಚಿ, ಹುಸೇನಬಿ ಧಾರವಾಡ, ಪ್ರಕಾಶ ಶಿಗ್ಲಿ, ಮೊದೀನಸಾಬ ಶಿರೂರ, ಹಿರಿಯರಾದ ಬಸವರಾಜ ಹರಿವಾಳದ ಸೇರಿದಂತೆ ಹಲವರಿದ್ದರು.