ಸಾರಾಂಶ
ಕಂದಾಯ ಇಲಾಖೆಯ ಕೆಲ ತಾಂತ್ರಿಕ ಕಾರಣಗಳಿಂದ, ರೈತರ ಪಹಣಿಯಲ್ಲಿ ಫ್ಲಾಗ್ ಇಡಲಾಗಿದೆ.
ಹೂವಿನಹಡಗಲಿ: ಪಟ್ಟಣದ ಪುರಸಭೆಯ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಕಾಮಗಾರಿಗಳಿಗೆ ಶಾಸಕ ಕೃಷ್ಣ ನಾಯ್ಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುರಸಭೆಯ ಎಸ್‌ಎಫ್‌ಸಿಯ ₹57 ಲಕ್ಷ, 15ನೇ ಹಣಕಾಸು ಯೋಜನೆಯ ₹92 ಲಕ್ಷ ಸೇರಿದಂತೆ ಒಟ್ಟು ₹1.50 ಕೋಟಿ ಮೊತ್ತದ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಗಿದೆ ಎಂದರು.ಮುಂದಿನ ದಿನ ಈ ಹಿಂದೆ ಅರೆಬರೆಯಾಗಿರುವ ಯುಜಿಡಿ ಕಾಮಗಾರಿ, ಸಿಸಿ ರಸ್ತೆ, ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಪಟ್ಟಣದ ಸಮಗ್ರ ಅಭಿವೃದ್ಧಿ ಮಾಡುತ್ತೇನೆಂದು ಹೇಳಿದರು.
ಪಹಣಿಯಲ್ಲಿ ಫ್ಲಾಗ್ ತೆರವಿಗೆ ಕ್ರಮ:ಕಂದಾಯ ಇಲಾಖೆಯ ಕೆಲ ತಾಂತ್ರಿಕ ಕಾರಣಗಳಿಂದ, ರೈತರ ಪಹಣಿಯಲ್ಲಿ ಫ್ಲಾಗ್ ಇಡಲಾಗಿದೆ. ಇನಾಂ ಭೂಮಿ ಮತ್ತು ಭೂ ರಹಿತ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾಗಿರುವ ಭೂಮಿಯ ಪಹಣಿಯಲ್ಲಿ ಫ್ಲಾಗ್ ತೆರಲು ಸಾಧ್ಯವಿಲ್ಲ. ಆದರೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಮಾತ್ರ ಫ್ಲಾಗ್ ತೆರವಿಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.
ಪಹಣಿಯಲ್ಲಿ ಫ್ಲಾಗ್ ಹೊಂದಿರುವ ರೈತರು ಫಾರಂ-2 ಅರ್ಜಿ ಸಲ್ಲಿಸಬೇಕು. ನಂತರದಲ್ಲಿ ಅಧಿಕಾರಿಗಳು ಪರಿಶೀಲನೆ ಮಾಡಿ ತೆರವು ಮಾಡಲು ಸೂಚನೆ ನೀಡಿದ್ದೇನೆ. ಆದರೆ ಸರ್ಕಾರದಿಂದ ಭೂ ರಹಿತರಿಗೆ ಮಂಜೂರಾಗಿರುವ ಭೂಮಿಯನ್ನು ಪರಭಾರೆ ಮಾಡಬಾರದೆಂಬ ಕಾರಣಕ್ಕಾಗಿ ಫ್ಲಾಗ್ ಇಟ್ಟಿದ್ದಾರೆ. ಅವುಗಳನ್ನು ತೆರವು ಮಾಡಲು ಸಾಧ್ಯವಿಲ್ಲ ಎಂದರು.ಕಂದಾಯ ಕಚೇರಿಯಲ್ಲಿ ಸೂಕ್ತ ದಾಖಲೆಗಳು ಲಭ್ಯತೆಯನ್ನು ನೋಡಿಕೊಂಡು ಫ್ಲಾಗ್ ತೆರವು ಮಾಡಬೇಕು. ಕೆಲವರು ನಕಲಿ ದಾಖಲೆಗಳಿಂದ ಫ್ಲಾಗ್ ತೆರವಿಗೆ ಅರ್ಜಿ ಹಾಕುತ್ತಾರೆ. ಅಂತಹ ಅರ್ಜಿಗಳನ್ನು ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿರುವ ಸಮಿತಿಗೆ ಕಳಿಸಬೇಕೆಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪುರಸಭೆ ಸದಸ್ಯ ವಾರದ ಗೌಸ್ ಮೋಹಿದ್ದೀನ್, ಎಸ್.ತಿಮ್ಮಣ್ಣ, ಹಣ್ಣಿ ಶಶಿಧರ, ತೋಟನಾಯ್ಕ, ವೀರಸಿಂಗ್ ರಾಠೋಡ್, ಎ.ಜೆ. ವೀರೇಶ, ಪರಶುರಾಮ, ಬಸವರಾಜ, ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್, ಪುರಸಭೆಯ ಸದಸ್ಯರು ಸೇರಿದಂತೆ ಇತರರಿದ್ದರು.