ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕರೆತಂದು ಅವರಿಂದ ನಾನೂರು ಕೋಟಿಗೂ ಅಧಿಕ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನಡೆಸಲು ನಾನು ಸಜ್ಜಾಗಿದ್ದೇನೆ, ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿಗಳ ದಿನಾಂಕ ನಿಗದಿಯಾಗಲಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಯಳಂದೂರು
ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕರೆತಂದು ಅವರಿಂದ ನಾನೂರು ಕೋಟಿಗೂ ಅಧಿಕ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನಡೆಸಲು ನಾನು ಸಜ್ಜಾಗಿದ್ದೇನೆ, ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿಗಳ ದಿನಾಂಕ ನಿಗದಿಯಾಗಲಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.ಯಳಂದೂರಿನಲ್ಲಿ ಪಬ್ಲಿಕ್ ಶಾಲೆ ಸಹಯೋಗದೊಂದಿಗೆ ಅಯೋಜಿಸಲಾಗಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಶೀಘ್ರದಲ್ಲೆ ಕೊಳ್ಳೇಗಾಲ ಕ್ಷೇತ್ರಕ್ಕೆ ಸಿಎಂ ಬರುತ್ತಾರೆ. ಚಾ.ನಗರ ಜಿಲ್ಲೆ ಮತ್ತು ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಹಿರಿಕೆರೆ ಅಭಿವೃದ್ದಿ, ಯಳಂದೂರು ಆಸ್ಪತ್ರೆ ಕಟ್ಟಡ ಉದ್ಘಾಟನೆ, ಮುಡಿಗುಂಡಸೇತುವೆ, ಕೊಳ್ಳೇಗಾಲದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣ, ಮುಡಿಗುಂಡ ಸೇತುವೆ ಹೀಗೆ ಹಲವು ಕಾಮಗಾರಿಗೆ ಭೂಮಿ ಪೂಜೆ ನಡೆಸಲಾಗುವುದು, ನಾನು ಅಭಿವೃದ್ದಿ ವಿಚಾರಗಳಲ್ಲಿ ಕೈಕಟ್ಟಿ ಕುಳಿತಿಲ್ಲ, ನನ್ನ ಕೈಲಾದ ಮಟ್ಟಿಗೆ ಕೆಲಸ ಮಾಡುತ್ತಿದ್ದೆನೆ, 997 ಕೋಟಿ ರುಗಳ ಮತ್ತೊಂದು ಪ್ರಾಜೆಕ್ಟ್ ಚರ್ಚೆ ಹಂತದಲ್ಲಿದೆ ಎಂದರು.
ಯಳಂದೂರಿನಲ್ಲಿ ಜಿ ಪ್ಲಸ್ 2 ಮಾದರಿ ಡಿಗ್ರಿ ಕಾಲೇಜು ಕಟ್ಟಡಕ್ಕೆ ನಿರ್ಮಾಣಕ್ಕೆ 30 ಗುಂಟೆ ಜಾಗ ಮಂಜೂರಾಗಿದೆ. ಎರಡೂವರೆ ಕೋಟಿ ರು. ಟೆಂಡರ್ ಪ್ರಕ್ರಿಯೆ ಆಗಿದೆ. ಮುಂದಿನ ವರ್ಷಕ್ಕೆ ಪದವಿವಿದ್ಯಾರ್ಥಿಗಳಿಗೆ ಈ ಕಟ್ಟಡ ಉಪಯೋಗ ಆಗಲಿದೆ, ಕ್ಷೇತ್ರದ ಸಮಗ್ರ ಅಭಿವೃದ್ದಿ ಹಾಗೂ ಯಳಂದೂರಿನಲ್ಲೊಂದು ಸುಂದರ ವಿಶಾಲವಾದ ಕ್ರೀಡಾಂಗಣ ಆಗಬೇಕು ಎಂಬ ದೃಷ್ಟಿಯಿಂದ ಹಲವು ಬಾರೀ ನಾನು ಸರ್ಕಾರದ ಗಮನ ಸೆಳೆದಿರುವೆ, ಸೂಕ್ತ ಜಾಗ ನೀಡಿದರೆ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದರು.ಯಳಂದೂರು ತಾಲೂಕಿನಲ್ಲಿ ಕ್ರೀಡಾಂಗಣ ಆಗಬೇಕು ಎಂಬುದು ನನ್ನ ಹೆಬ್ಬಯಕೆ, 33 ಹಳ್ಳಿ, 33 ಕೆರೆ ಹೊಂದಿರುವ ಅತೀ ಚಿಕ್ಕತಾಲೂಕು ಇದಾಗಿದ್ದು ಇಲ್ಲಿನ ಒಂದೇ ಜಾಗದಲ್ಲಿ ಡಿಗ್ರಿ ಕಾಲೇಜು, ಪಿಯುಸಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನಡೆಯುತ್ತಿವೆ. ಈ ಹಿಂದೆ ಇಲ್ಲಿ ವಿದ್ಯಾರ್ಥಿಗಳು ಜಾಗದ ವಿಚಾರವಾಗಿ ಪ್ರತಿಭಟನೆ ನಡೆಸಿದರು. ನಾನು ಈ ವಿಚಾರವನ್ನು ಹಿಂದಿನ ಸಚಿವರ ಜೊತೆ ಚರ್ಚಿಸಿ ಪುನಃ ಅಂದಾಜು ಪಟ್ಟಿ ಸಲ್ಲಿಸಿ ಎರಡೂವರೆ ಕೋಟಿ ಅನುದಾನ ಕಾಲೇಜಿಗೆ ಮಂಜೂರು ಮಾಡಿಸಿದ್ದು ನಿಜಕ್ಕೂ ನನಗೆ ತೃಪ್ತಿ ಇದೆ ಎಂದರು.
ಹಿಂದಿನ ಡಿಸಿ ಶಿಲ್ಪಾನಾಗ್ ಅವರು ಈ ಜಾಗ ಪರಿಶೀಲಿಸಿದ್ದರು. ಎನ್‌ಒಸಿ ಸೇರಿದಂತೆ ಹಲವು ವಿಚಾರದಲ್ಲಿ ಅಡೆತಡೆ ಆಯಿತು. ಪ್ರಾಂಶುಪಾಲರು ಒತ್ತಡಕ್ಕೆ ಮಣಿದು ಅಥವಾ ಧಮಕಿ ಹಿನ್ನೆಲೆ ಸರ್ಕಾರಕ್ಕೆ ಪತ್ರ ಬರೆದು ಜಾಗದ ವಿಚಾರದಲ್ಲಿ ತಗಾದೆ ತೆಗೆದಿದ್ದರು. ಇದನ್ನ ಪ್ರಶ್ನಿಸಿ ನಾನೇ ಪ್ರಾಂಶುಪಾಲರನ್ನು ಪ್ರಶ್ನಿಸಿದ್ದೆ. ಈಗ ಎಲ್ಲವೂ ಸುಗಮವಾಗಿದೆ. ಪ್ರಾಂಶುಪಾಲರು ಸಹಕಾರ ನೀಡಿದ್ದಾರೆ. ಶೀಘ್ರದಲ್ಲೆ ಡಿಗ್ರಿ ಕಾಲೇಜು ಕಟ್ಟಡಕ್ಕೆ ಭೂಮಿ ಪೂಜೆ ಆಗಲಿದೆ ಎಂದರು.