ಸಾರಾಂಶ
ತುರುವೇಕೆರೆಯಲ್ಲಿ ೨೦೨೨-೨೩ನೇ ಸಾಲಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕ್ರಮದಡಿ ಶೇ ೫ರ ಯೋಜನೆಯ ಅನಿರ್ಬಂಧಿತ ಅನುದಾನದಲ್ಲಿ ಸುಮಾರು ೨೦ ಲಕ್ಷ ರು. ವೆಚ್ಚದಲ್ಲಿ ೧೭ ಫಲಾನುಭವಿ ಅಂಗವಿಕಲರಿಗೆ ಯಂತ್ರ ಚಾಲಿತ ವಾಹನವನ್ನು ನೀಡಲಾಯಿತು.
ವಾಹನದ ಕೀ ನೀಡಿ ಹಾರೈಕೆ
ಕನ್ನಡಪ್ರಭ ವಾರ್ತೆ ತುರುವೇಕೆರೆಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ೨೦೨೨-೨೩ನೇ ಸಾಲಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕ್ರಮದಡಿ ಶೇ ೫ರ ಯೋಜನೆಯ ಅನಿರ್ಬಂಧಿತ ಅನುದಾನದಲ್ಲಿ ಸುಮಾರು ೨೦ ಲಕ್ಷ ರು. ವೆಚ್ಚದಲ್ಲಿ ೧೭ ಫಲಾನುಭವಿ ಅಂಗವಿಕಲರಿಗೆ ಯಂತ್ರ ಚಾಲಿತ ವಾಹನವನ್ನು ಶಾಸಕ ಎಂ.ಟಿ. ಕೃಷ್ಣಪ್ಪ ವಿತರಣೆ ಮಾಡಿದರು.
ವಾಹನದ ಕೀ ನೀಡಿ ಶುಭ ಹಾರೈಸಿ ಮಾತನಾಡಿದ ಶಾಸಕ ಕೃಷ್ಣಪ್ಪ, ಶೇ.೫ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಈಗಾಗಲೇ ೭೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ಯಂತ್ರ ಚಾಲಿತ ವಾಹನಗಳನ್ನು ನೀಡಲಾಗಿದೆ. ಇನ್ನು ಉಳಿದಿರುವ ೮೦ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ವಾಹನ ನೀಡಲಾಗುವುದು. ಫಲಾನುಭವಿಗಳು ಸ್ಕೂಟರ್‌ಗಳನ್ನು ಚಲಾಯಿಸುತ್ತಿರುವುದರಿಂದ ರಸ್ತೆಯಲ್ಲಿ ಜಾಗ್ರತೆಯಿಂದ ಚಲಿಸಬೇಕು ಎಂದು ಸಲಹೆ ನೀಡಿದರು.ಫಲಾನುಭವಿಗಳಿಗೆ ವಿತರಿಸಿದ ಒಂದು ಯಂತ್ರ ಚಾಲಿತ ವಾಹನದ ಸೀಟು ಹರಿದು ಹೋಗಿತ್ತು. ಎಂಜಿನ್ ಸಹ ಹಳೆಯದಾಗಿತ್ತು. ವಾಹನದ ತಳಭಾಗದಲ್ಲಿ ತುಕ್ಕು ಹಿಡಿದಿರುವ ಹಳೆಯ ವಾಹನ ನೀಡಲಾಗಿತ್ತು. ಮೇಲ್ನೋಟಕ್ಕೆ ಅದು ಹಳೆಯ ವಾಹನವೆಂದು ಹೇಳಬಹುದಾಗಿತ್ತು. ವಾಹನದ ಫಲಾನುಭವಿ ನಮಗೆ ಹೊಸ ಸ್ಕೂಟರ್ ಬೇಕು ಹಳೆಯ ಸ್ಕೂಟರ್ ಬೇಡ ಎಂದು ಸ್ಥಳದಲ್ಲೇ ಪಟ್ಟು ಹಿಡಿದರು. ನಂತರ ಎಂಆರ್‌ಡಿಬಿಯ ಎಂ.ಬಿ. ಶಿವಶಂಕರ್ ಅವರು ಶೋರೂಮ್ ನವರೊಂದಿಗೆ ಮಾತನಾಡಿ ಬದಲಾಯಿಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಇಒ ಶಿವರಾಜಯ್ಯ, ಮುಖಂಡರಾದ ಗುತ್ತಿಗೆದಾರರಾದ ತ್ಯಾಗರಾಜು, ಸಿದ್ಧಗಂಗಯ್ಯ, ಮಧು, ರಾಜಕುಮಾರ್, ಬಸವಣ್ಣ ವಿಕಲಚೇತನರ ಸಂಘದ ನಟೇಶ್, ವೀಣಾ, ಲತಾ, ಮಂಗಳಗೌರಮ್ಮ, ನಾಗಮಣಿ, ನವೀನಾ, ಪರಮೇಶ್, ಸದಸ್ಯರು, ಫಲಾನುಭವಿಗಳು ಸೇರಿ ಇತರರು ಇದ್ದರು.