ಸಾರಾಂಶ
ಲಕ್ಷ್ಮೇಶ್ವರ ಪೇಟೆ ಹಾವಳಿ ಆಂಜನೇಯ ದೇವಸ್ಥಾನದ ಹತ್ತಿರ ಗುರುವಾರ ಶಾಸಕ ಡಾ. ಚಂದ್ರು ಲಮಾಣಿ ಚಾವಡಿಯಿಂದ ಅರ್ಧಕ್ಕೆ ನಿಂತಿದ್ದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಲಕ್ಷ್ಮೇಶ್ವರ: ಇಲ್ಲಿನ ಪೇಟೆ ಹಾವಳಿ ಆಂಜನೇಯ ದೇವಸ್ಥಾನದ ಹತ್ತಿರ ಗುರುವಾರ ಶಾಸಕ ಡಾ. ಚಂದ್ರು ಲಮಾಣಿ ಚಾವಡಿಯಿಂದ ಅರ್ಧಕ್ಕೆ ನಿಂತಿದ್ದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ‘ಶಿಗ್ಲಿ ನಾಕಾದಿಂದ ಹಾವಳಿ ಆಂಜನೇಯನ ದೇವಸ್ಥಾನದವರೆಗೆ ಮಾತ್ರ ಸಿಸಿ ರಸ್ತೆ ನಿರ್ಮಾಣ ಆಗಿತ್ತು. ಆದರೆ ಅಲ್ಲಿಂದ ದೂದಪೀರಾಂ ದರ್ಗಾದವರೆಗಿನ ರಸ್ತೆ ನೆನೆಗುದಿಗೆ ಬಿದ್ದಿತ್ತು. ಬಹಳ ವರ್ಷಗಳಿಂದ ಈ ಭಾಗದ ನಿವಾಸಿಗಳು ರಸ್ತೆ ನಿರ್ಮಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಕೊನೆಗೂ ಅವರ ಕನಸು ಈಡೇರಿದ್ದು ಸದ್ಯ ೨೦೦ ಮೀಟರ್ ರಸ್ತೆ ನಿರ್ಮಿಸಲು ಅನುದಾನ ಬಂದಿದೆ. ಈ ಕಾಮಗಾರಿ ಮುಗಿಯುವುದರೊಳಗಾಗಿ ಉಳಿದ ರಸ್ತೆ ನಿರ್ಮಿಸಲು ಶಾಸಕರ ಅನುದಾನ ಮಂಜೂರು ಮಾಡಿಸಲಾಗುವುದು’ ಎಂದು ಹೇಳಿದರು.‘ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈಗಾಗಲೇ ಸೂರಣಗಿಯಿಂದ ಲಕ್ಷ್ಮೇಶ್ವರಕ್ಕೆ ಹೊಸ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಪ್ರಸ್ತಾವನೆ ಕಳಿಸಲಾಗಿದ್ದು ಅನುದಾನ ಬಂದ ತಕ್ಷಣ ಪೈಪ್‌ಲೈನ್ ಅಳವಡಿಸಿ ನೀರಿನ ಸಮಸ್ಯೆ ಬಗೆ ಹರಿಸಲಾಗುವುದು. ಸಾರ್ವಜನಿಕರೂ ಕೂಡ ನೀರನ್ನು ಹಿತಮಿತವಾಗಿ ಬಳಸಬೇಕು. ಬೇಕಾಬಿಟ್ಟಿಯಾಗಿ ನೀರನ್ನು ಪೋಲು ಮಾಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲವ್ವ ದುರ್ಗಣ್ಣವರ, ಉಪಾಧ್ಯಕ್ಷ ಫಿರ್ದೋಷ್ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಪುರಸಭೆ ಎಂಜಿನಿಯರ್ ವೀರೇಂದ್ರಸಿಂಗ್ ಕಾಟೆವಾಲೆ ಹಾಗೂ ಪುರಸಭೆ ಸಿಬ್ಬಂದಿ ಸೇರಿದಂತೆ ಮತ್ತಿತರರು ಇದ್ದರು.