ಸಾರಾಂಶ
ಗುತ್ತಿಗೆದಾರರು ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಂಡು ಉತ್ತಮ ಕೆಲಸ ನಿರ್ವಹಿಸಬೇಕು. ಗ್ರಾಮಸ್ಥರು ಗುಣಮಟ್ಟದ ಕಾಮಗಾರಿ ನಡೆಯದಿದ್ದರೆ ಅದನ್ನು ವಿರೋಧಿಸಬೇಕು. ಕಳಪೆ ಕಾಮಗಾರಿ ಮಾಡಿದರೆ ತಕ್ಷಣ ನನ್ನ ಗಮನಕ್ಕೆ ತಂದರೆ ಗುತ್ತಿಗೆದಾರರ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಅಘಲಯ ಗ್ರಾಮದಲ್ಲಿ ಕೆರೆಗೆ ತಡೆಗೋಡೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಟಿ.ಮಂಜು ಗುದ್ದಲಿ ಪೂಜೆ ನೆರವೇರಿಸಿದರು.ಲೋಕೋಪಯೋಗಿ ಇಲಾಖೆ ಅನುದಾನದಡಿಯಲ್ಲಿ ಅಘಲಯದಿಂದ- ಮಂಡ್ಯ- ಹೂವಿನಹಡಗಲಿ ಮುಖ್ಯ ರಸ್ತೆ ಸಂಪರ್ಕಿಸುವ ಸುಮಾರು 1.50 ಕೋಟಿ ರು. ವೆಚ್ಚದ ಅಘಲಯ ಕೆರೆಗೆ ತಡೆಗೋಡೆ ಮತ್ತು ರಸ್ತೆ ಅಭಿವೃದ್ಧಿ ಮತ್ತು ಕುಂದೂರು- ಅಘಲಯ ಸಂಪರ್ಕ ಕಲ್ಪಿಸುವ ಸುಮಾರು 1.50 ಕೋಟಿ ರು. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಗುತ್ತಿಗೆದಾರರು ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಂಡು ಉತ್ತಮ ಕೆಲಸ ನಿರ್ವಹಿಸಬೇಕು. ಗ್ರಾಮಸ್ಥರು ಗುಣಮಟ್ಟದ ಕಾಮಗಾರಿ ನಡೆಯದಿದ್ದರೆ ಅದನ್ನು ವಿರೋಧಿಸಬೇಕು. ಕಳಪೆ ಕಾಮಗಾರಿ ಮಾಡಿದರೆ ತಕ್ಷಣ ನನ್ನ ಗಮನಕ್ಕೆ ತಂದರೆ ಗುತ್ತಿಗೆದಾರರ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಂದು ಎಚ್ಚರಿಸಿದರು.ರಾಜ್ಯ ಸರ್ಕಾರವು ಶೇ.90 ರಷ್ಟು ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸುತ್ತಿದೆ. ಇದರಿಂದ ಮೂಲ ಸೌಲಭ್ಯಗಳಿಗೆ ಅಗತ್ಯ ಅನುದಾನ ನೀಡುತ್ತಿಲ್ಲ. ಈಗ ನೀಡಿರುವ ಅಲ್ಪಸ್ವಲ್ಪ ಅನುದಾನದಲ್ಲಿ ಹಂತ ಹಂತವಾಗಿ ತಾಲೂಕಿನ ಗ್ರಾಮಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ವೇಳೆ ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ತಾಲೂಕು ಜೆಡಿಎಸ್ ಮುಖಂಡರಾದ ಅಜಯ್ ರಾಮೇಗೌಡ, ದೊಡ್ಡಸೋಮನಹಳ್ಳಿ ಮಂಜಣ್ಣ, ನಾಗೇಂದ್ರ, ಅನಿಲ್, ಯೋಗಣ್ಣ, ಲೋಕೇಶ್, ಉಮೇಶ್, ಗುತ್ತಿಗೆದಾರ ರವಿ, ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಧ್ರುವಕುಮಾರ್ ಸೇರಿದಂತೆ ಹಲವರು ಇದ್ದರು.