ಕನ್ನಡಪ್ರಭ ವಾರ್ತೆ ಬೆಳಗಾವಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟು, ಹಾಳು ಮಾಡಿದ್ದರಿಂದ ಎಲ್ ಆ್ಯಂಡ್ ಟಿ ವಿರುದ್ಧ ಆಕ್ರೋಶಗೊಂಡ ಶಾಸಕ ಅಭಯ ಪಾಟೀಲ ಸಹಿತ ಧರಣಿ ನಡೆಸಿ ಕಚೇರಿಗೆ ಬೀಗ ಹಾಕಿದ ಪ್ರಸಂಗ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟು, ಹಾಳು ಮಾಡಿದ್ದರಿಂದ ಎಲ್ ಆ್ಯಂಡ್ ಟಿ ವಿರುದ್ಧ ಆಕ್ರೋಶಗೊಂಡ ಶಾಸಕ ಅಭಯ ಪಾಟೀಲ ಸಹಿತ ಧರಣಿ ನಡೆಸಿ ಕಚೇರಿಗೆ ಬೀಗ ಹಾಕಿದ ಪ್ರಸಂಗ ಸೋಮವಾರ ನಡೆದಿದೆ.

ಟಿಳಕವಾಡಿ ಭಾಗದ ಚನ್ನಮ್ಮನಗರ, ಸ್ವಾಮಿನಾಥ ಕಾಲೋನಿ, ಪಾರ್ವತಿ ನಗರ, ಗುರುಪ್ರಸಾದ ನಗರ, ಕಾವೇರಿ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೈಪ್‌ಲೈನ್ ಅಳವಡಿಸಲು ನೆಲ ಅಗೆದು ಬೇಕಾಬಿಟ್ಟಿಯಾಗಿ ಮಣ್ಣು ಹಾಕಿ, ರಸ್ತೆಗಳನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ ಸ್ಥಳೀಯ ನಾಗರಿಕರು ಹಾಗೂ ಪಾಲಿಕೆಯ ಕೆಲವು ಸದಸ್ಯರು ಎಲ್ ಆ್ಯಂಡ್ ಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಶಾಸಕ ಅಭಯ ಪಾಟೀಲ ಕೂಡ ಧರಣಿ ನಡೆಸಿದರು.

ಆ ಕಂಪನಿ ಅಧಿಕಾರಿಗಳು ಸ್ಥಳಕ್ಕಾಗಮಿಸದ ಹಿನ್ನೆಲೆಯಲ್ಲಿ ಕಚೇರಿ ಬಾಗಿಲಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕೊನೆಗೆ ಆಗಮಿಸಿದ ಅಧಿಕಾರಿಗಳು ಶೀಘ್ರವೇ ರಸ್ತೆಗಳ ದುರಸ್ತಿ ಆರಂಭಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಅಭಯ ಪಾಟೀಲ, ಒಂದು ಕಾಲಕ್ಕೆ ಬೆಳಗಾವಿ ಸುಂದರ ನಗರವಾಗಿತ್ತು. ಆದರೆ, ಎಲ್‌ ಆ್ಯಂಡ್ ಟಿ ಬಂದ ಬಳಿಕ ಆ ಸುಂದರತೆ ಹಾಳು ಮಾಡಿದ್ದಾರೆ. ಅನೇಕ ಕಡೆ ರಸ್ತೆ ಅಗೆದು ಹಾಗೆಯೇ ಬಿಟ್ಟಿದ್ದಾರೆ. ಕೆಲವು ಕಡೆ ಮಣ್ಣು ಮುಚ್ಚಿದ್ದರೂ ಹದಿನೈದು ದಿನಗಳಲ್ಲಿ ರಸ್ತೆಯೇ ಕೆಟ್ಟು ಹೋಗುತ್ತಿದೆ. ಈ ಬಗ್ಗೆ ಎರಡು ಸಲ ಬೆಂಗಳೂರಿನಲ್ಲೇ ಮೇಲಾಧಿಕಾರಿಗಳ ಜತೆಗೆ ಸಭೆ ಮಾಡಿದ್ದೇನೆ. ಕಂಪನಿಯ ದಕ್ಷಿಣ ಭಾರತದ ಅಧಿಕಾರಿಗಳ ಜತೆಗೂ ಸಭೆ ಮಾಡಿ ಸಮಸ್ಯೆ ವಿವರಿಸಿದ್ದೇನೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಧರಣಿ ಮಾಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ಹೊರಹಾಕಿದರು.