ಗ್ರಾಮೀಣ ಭಾಗದಲ್ಲಿ ಬಡ ಜನರಿಗೆ ಕೆಲಸ ಒದಗಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಮನ್ರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಈಗ ಹೆಸರು ಬದಲಾಯಿಸಿ ಭಾವನಾತ್ಮಕವಾಗಿ ಸೆಳೆಯುವ ಕೀಳುಮಟ್ಟದ ತಂತ್ರಗಾರಿಕೆ ಮಾಡುತ್ತಿದೆ. ಗ್ರಾಪಂಗಳ ಅಧಿಕಾರ ಮೊಟಕುಗೊಳಿಸುವ, ಅಧಿಕಾರ ವಿಕೇಂದ್ರೀಕರಣದ ವಿರುದ್ಧದ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಆಗ್ರಹಿಸಿದರು.
ಹಾವೇರಿ: ಗ್ರಾಮೀಣ ಭಾಗದಲ್ಲಿ ಬಡ ಜನರಿಗೆ ಕೆಲಸ ಒದಗಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಮನ್ರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಈಗ ಹೆಸರು ಬದಲಾಯಿಸಿ ಭಾವನಾತ್ಮಕವಾಗಿ ಸೆಳೆಯುವ ಕೀಳುಮಟ್ಟದ ತಂತ್ರಗಾರಿಕೆ ಮಾಡುತ್ತಿದೆ. ಗ್ರಾಪಂಗಳ ಅಧಿಕಾರ ಮೊಟಕುಗೊಳಿಸುವ, ಅಧಿಕಾರ ವಿಕೇಂದ್ರೀಕರಣದ ವಿರುದ್ಧದ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಆಗ್ರಹಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದಿನ ಯುಪಿಎ ಸರ್ಕಾರ ಗ್ರಾಮೀಣ ಭಾಗದ ಜನತೆ ವಲಸೆ ಹೋಗದಂತೆ ತಡೆಯಲು ಹಾಗೂ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಮನರೇಗಾ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆ ಪ್ರತಿ ಗ್ರಾಪಂಗಳಿಗೆ ಆರ್ಥಿಕ ಶಕ್ತಿಯನ್ನು ನೀಡಿತ್ತು. ಪ್ರತಿ ಗ್ರಾಪಂಗಳು ಪ್ರತಿ ವರ್ಷ ಒಂದು ಕೋಟಿ ರು.ಗೂ ಅಧಿಕ ಮೊತ್ತದ ಕಾಮಗಾರಿ ಮಾಡುವ ಮೂಲಕ ಯಶಸ್ಸು ಕಂಡಿದ್ದವು. ಅಲ್ಲದೇ ಬಹಳಷ್ಟು ಜನ ಬದುಕು ಕಟ್ಟಿಕೊಂಡಿದ್ದರು. ಆದರೀಗ ಕೇಂದ್ರದ ಬಿಜೆಪಿ ಸರ್ಕಾರ ಯಾವುದೇ ಹೊಸ ಯೋಜನೆ, ಹೊಸ ಕಾರ್ಯಕ್ರಮ ಜಾರಿಗೊಳಿಸದೇ ನರೇಗಾ ಯೋಜನೆಯ ಹೆಸರು ಬದಲಾಯಿಸಿ, ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಕೀಳು ಮಟ್ಟದ ತಂತ್ರಗಾರಿಕೆ ಮಾಡುತ್ತಿದೆ ಎಂದು ಆರೋಪಿಸಿದರು.ಯುಪಿಎ ಅವಧಿಯ ನಿರ್ಮಲ್ ಭಾರತ್ ಯೋಜನೆಯನ್ನು ಸ್ವಚ್ಛ ಭಾರತ, ಇಂದಿರಾ ಆವಾಸ್ ಯೋಜನೆಯನ್ನು ಪ್ರಧಾನ ಮಂತ್ರಿ ಆವಾಸ್ ಅಂತಾ ಹೀಗೆ 30ಕ್ಕೂ ಹೆಚ್ಚು ಹಳೆ ಯೋಜನೆಗಳ ಹೆಸರು ಬದಲಿಸಿದೆಯೇ ವಿನಃ ಯಾವುದೇ ಜನೋಪಯೋಗಿ ಕೆಲಸ ಮಾಡಲಿಲ್ಲ. ಹೆಸರು ಬದಲಿಸೋದಷ್ಟೆ ಅಲ್ಲ, ಗಾಂಧೀಜಿ ಹೆಸರು ತೆಗೆದು ಅಗೌರವ ತೋರಿಸಿದ್ದಾರೆ. ವಿಕಸಿತ ಭಾರತ್ ಗ್ಯಾರಂಟಿ ರೋಜಗಾರ್ ಯೋಜನೆ ಗಾಂಧಿ ಕಲ್ಪನೆ, ತತ್ವ ಸಿದ್ದಾಂತಕ್ಕೆ ವಿರುದ್ದವಾಗಿದೆ. ಇದು ಗ್ರಾಪಂಗಳ ಅಧಿಕಾರ ವಿಕೇಂದ್ರೀಕರಣದ ವಿರುದ್ಧವಾಗಿದೆ. ಕೂಲಿ ದರ ನಿಗದಿ ಸ್ಪಷ್ಟತೆ ಇಲ್ಲ,
ಕಾರ್ಪೊರೇಟ್ ದಬ್ಬಾಳಿಕೆಗೆ ಕೂಲಿ ಕಾರ್ಮಿಕರನ್ನು ಸಿಲುಕಿಸುತ್ತಾರೆಂಬ ಅನುಮಾನ ಮೂಡುತ್ತಿದೆ. ಗ್ರಾಮೀಣ ಕಾರ್ಮಿಕರು, ರೈತರ ಕೂಲಿ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ. ಕಾಯಿದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆದಂತೆ ಇದನ್ನೂ ಹಿಂಪಡೆದು ಮನರೇಗಾ ಯೋಜನೆ ಮುಂದುವರೆಸುವಂತೆ ಆಗ್ರಹಿಸಿ ಹಂತ ಹಂತವಾಗಿ ಪ್ರತಿಭಟನೆ, ಜಾಗೃತಿ ಮೂಡಿಸಲಾಗುವುದು ಎಂದರು.ಶಾಸಕ ಯು.ಬಿ. ಬಣಕಾರ ಮಾತನಾಡಿ, ಮನರೇಗಾ ಯೋಜನೆಯನ್ನು ಬಡ ಕೂಲಿ ಕಾರ್ಮಿಕರ ಕಾಮಧೇನು ಎನ್ನಲಾಗುತ್ತಿತ್ತು. ಕೇಂದ್ರ ಸರ್ಕಾರ ಗ್ರಾಮೀಣ ಜನರ ಆಶಾಕಿರಣವಾಗಿದ್ದ ಯೋಜನೆಯನ್ನು ಕಾಯಿದೆ ಬದಲಾಯಿಸಿ ಏಕಾಏಕಿ ಕಿತ್ತುಕೊಂಡಿದೆ. ಕಾಯಿದೆ ಜಾರಿಗೆ ತರುವ ಮುನ್ನ ಚರ್ಚೆಗೆ ಆಹ್ವಾನ ಮಾಡಬೇಕಿತ್ತು. ಆಗ ಗ್ರಾಮಸಭೆಗಳಲ್ಲಿ ಕಾಮಗಾರಿ ಸಿದ್ಧಪಡಿಸಲಾಗುತ್ತಿತ್ತು, ಈಗ ಕೇಂದ್ರ ನಿಗದಿಪಡಿಸಿದ ಏರಿಯಾ ಭಾಗದಲ್ಲಿ ಮಾತ್ರ ಕಾಮಗಾರಿ ಕೈಗೊಳ್ಳಬೇಕಿದೆ. ಇದರಿಂದ ಕೃಷಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದು, ಹಿಂಪಡೆಯುವಂತೆ ಹೋರಾಟ ನಡೆಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಂ.ಎಂ. ಹಿರೇಮಠ, ಎಸ್‌ಎಫ್‌ಎನ್ ಗಾಜೀಗೌಡ್ರ, ಶಂಕರ ಮೆಹರವಾಡೆ, ಮಲ್ಲಿಕಾರ್ಜುನ ಬುರಡಿಕಟ್ಟಿ, ರಾಘವೇಂದ್ರ ಬಾಸೂರ, ಜಮೀರ ಜಿಗರಿ, ದಾಸಪ್ಪ ಕರ್ಜಗಿ ಇದ್ದರು.ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿ ಜೀ ರಾಮಜೀ ಯೋಜನೆಯನ್ನು ಹಿಂಪಡೆದು, ಮನರೇಗಾ ಯೋಜನೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಜ.18ರಂದು ಹಾವೇರಿಯ ಎಂ.ಎಂ. ವೃತ್ತದಲ್ಲಿ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಇದಕ್ಕೂ ಪೂರ್ವದಲ್ಲಿ ಅಂಬೇಡ್ಕರ್, ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ಅಂದು ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ಸತ್ಯಾಗ್ರಹ ಮಾಡುತ್ತಿದ್ದು, ಉಸ್ತುವಾರಿ ಸಚಿವರು, ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.