ಸಾರಾಂಶ
ಮಳೆಯಿಂದ ಮನೆ ಕಳೆದುಕೊಂಡು ಪರದಾಡುತ್ತಿದ್ದ ವೃದ್ಧೆಯೊಬ್ಬರ ಮನೆಗೆ ಭೇಟಿ ನೀಡಿ ಆಕೆಗೆ ತಾತ್ಕಾಲಿಕ ಪರಿಹಾರವನ್ನು ಶಾಸಕ ಸಿಮೆಂಟ್ ಮಂಜು ಒದಗಿಸಿದ್ದಾರೆ. ವೃದ್ಧೆಯ ಕಷ್ಟವನ್ನು ತಿಳಿದ ಶಾಸಕರು ಮನೆಯನ್ನು ವೀಕ್ಷಿಸಿ ಕ್ಯಾಮನಹಳ್ಳಿ ಗ್ರಾ.ಪಂ ಪಿಡಿಒ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ತಾತ್ಕಾಲಿಕ ಪರಿಹಾರ ವಿತರಿಸಲು ಆದೇಶಿಸಿದರು. ಈ ಹಿನ್ನೆಲೆಯಲ್ಲಿ ಕ್ಯಾಮನಹಳ್ಳಿ ಗ್ರಾ.ಪಂ ಪಿಡಿಒ ಗ್ರಾ.ಪಂ ಅಧ್ಯಕ್ಷ ಸಚಿನ್ ಅವರೊಡನೆ ವೃದ್ಧೆಯ ಮನೆಗೆ ಆಗಮಿಸಿ ೫೦೦೦ ರು.ಗಳ ತಾತ್ಕಾಲಿಕ ಪರಿಹಾರವನ್ನು ವಿತರಿಸಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಮಳೆಯಿಂದ ಮನೆ ಕಳೆದುಕೊಂಡು ಪರದಾಡುತ್ತಿದ್ದ ವೃದ್ಧೆಯೊಬ್ಬರ ಮನೆಗೆ ಭೇಟಿ ನೀಡಿ ಆಕೆಗೆ ತಾತ್ಕಾಲಿಕ ಪರಿಹಾರವನ್ನು ಶಾಸಕ ಸಿಮೆಂಟ್ ಮಂಜು ಒದಗಿಸಿದ್ದು ತಾಲೂಕಿನ ಮದನಾಪುರ ಗ್ರಾಮಸ್ಥರ ಶ್ಲಾಘನೆಗೆ ಕಾರಣವಾಗಿದೆ.ತಾಲೂಕಿನ ಕ್ಯಾಮನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಮದನಾಪುರ ಗ್ರಾಮದ ಸುಂದರಿ ಎಂಬ ವೃದ್ಧೆಯ ಮನೆ ಮಳೆಯಿಂದಾಗಿ ಸಂಪೂರ್ಣವಾಗಿ ಕುಸಿದು ಹೋಗಿದ್ದು ಮನೆಯ ಪಕ್ಕದ ತಾತ್ಕಾಲಿಕವಾಗಿ ಟಾರ್ಪಲ್ ಹಾಕಿಕೊಂಡು ನೆಲೆಸಿದ್ದರು. ಮನೆ ಬಿದ್ದು ಹಲವು ದಿನಗಳಾದರೂ ಸಹ ಕಂದಾಯ ಇಲಾಖೆಯವರಾಗಲಿ, ಗ್ರಾ.ಪಂ ನವರಾಗಲಿ ಅತ್ತ ಸುಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ವೃದ್ಧೆಯ ಕಷ್ಟವನ್ನು ತಿಳಿದ ಶಾಸಕರು ಮನೆಯನ್ನು ವೀಕ್ಷಿಸಿ ಕ್ಯಾಮನಹಳ್ಳಿ ಗ್ರಾ.ಪಂ ಪಿಡಿಒ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ತಾತ್ಕಾಲಿಕ ಪರಿಹಾರ ವಿತರಿಸಲು ಆದೇಶಿಸಿದರು. ಈ ಹಿನ್ನೆಲೆಯಲ್ಲಿ ಕ್ಯಾಮನಹಳ್ಳಿ ಗ್ರಾ.ಪಂ ಪಿಡಿಒ ಗ್ರಾ.ಪಂ ಅಧ್ಯಕ್ಷ ಸಚಿನ್ ಅವರೊಡನೆ ವೃದ್ಧೆಯ ಮನೆಗೆ ಆಗಮಿಸಿ ೫೦೦೦ ರು.ಗಳ ತಾತ್ಕಾಲಿಕ ಪರಿಹಾರವನ್ನು ವಿತರಿಸಿದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಗ್ರಾ.ಪಂ ಪಿಡಿಒಗಳು ಕಚೇರಿಯಲ್ಲಿ ಕೂರದೆ ಪ್ರತಿ ಗ್ರಾಮಗಳಿಗೂ ಹೋಗಿ ನೆರೆ ಪೀಡಿತರ ಕುರಿತು ಮಾಹಿತಿ ಪಡೆಯಬೇಕು. ಹಲವು ಬಡವರು ಸರ್ಕಾರದ ಪರಿಹಾರದ ಕುರಿತು ಮಾಹಿತಿಯಿಲ್ಲದೆ ಹಾಗೆ ಕಾಲ ಕಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಸಿಬ್ಬಂದಿ ಬಡವರಿಗೆ ಮೊದಲು ಸೇವೆ ಸಲ್ಲಿಸಲು ಮುಂದಾಗಬೇಕು. ವೃದ್ಧೆ ಸುಂದರಿ ಮನೆಗೆ ಸರಿಯಾದ ದಾಖಲಾತಿಗಳು ಇಲ್ಲದ ಕಾರಣ ಗ್ರಾ.ಪಂ ಸಿಬ್ಬಂದಿ ಅಕೆಗೆ ಮೊದಲು ಮನೆಯ ದಾಖಲಾತಿಗಳನ್ನು ಮಾಡಿಕೊಡಬೇಕು. ನಂತರ ಸರ್ಕಾರದಿಂದ ಮತ್ತಷ್ಟು ಪರಿಹಾರವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.