ದೇಶದ ಪ್ರಧಾನಮಂತ್ರಿಯಾಗಿ 12 ವರ್ಷಗಳ ಸೇವಾ ಪಯಣ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ದೇಶವನ್ನು ಮತ್ತಷ್ಟು ಶಕ್ತಿಯುತವಾಗಿ ಮುನ್ನಡೆಸುವ ಸಾಮರ್ಥ್ಯ ದೊರಕಲಿ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ವಸತಿ ಸೌಲಭ್ಯ, ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ರಕ್ಷಣೆ ಹಾಗೂ ಜನಧನ್ ಯೋಜನೆಯ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಸಾಮಾನ್ಯ ಜನರಿಗೆ ತಲುಪಿಸಲಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ದೇಶದ ಪ್ರಧಾನಮಂತ್ರಿಯಾಗಿ 12 ವರ್ಷಗಳ ಸೇವಾ ಪಯಣ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ದೇಶವನ್ನು ಮತ್ತಷ್ಟು ಶಕ್ತಿಯುತವಾಗಿ ಮುನ್ನಡೆಸುವ ಸಾಮರ್ಥ್ಯ ದೊರಕಲಿ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಪಟ್ಟಣದ ಶ್ರೀ ಸಕಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಭಾಗವಹಿಸಿ ಮಾತನಾಡಿದ ಅವರು, ದೇಶದ ನಾಯಕತ್ವ ಎಂದರೆ ಕೇವಲ ಆಡಳಿತವಲ್ಲ, ಅದು ಕೋಟ್ಯಂತರ ಜನರ ಆಶಯ ಮತ್ತು ನಿರೀಕ್ಷೆಗಳನ್ನು ಹೊತ್ತು ಸಾಗುವ ಜವಾಬ್ದಾರಿ. ಆ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 12 ವರ್ಷಗಳಿಂದ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.ದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಮನೆಮನೆಗೆ ಶೌಚಾಲಯ ನಿರ್ಮಾಣ, ಜಲ್ ಜೀವನ್ ಮಿಷನ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ, ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ವಸತಿ ಸೌಲಭ್ಯ, ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ರಕ್ಷಣೆ ಹಾಗೂ ಜನಧನ್ ಯೋಜನೆಯ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಸಾಮಾನ್ಯ ಜನರಿಗೆ ತಲುಪಿಸಲಾಗಿದೆ ಎಂದು ಹೇಳಿದರು.ರೈತರ ಆರ್ಥಿಕ ಬಲವರ್ಧನೆಗಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಸಣ್ಣ ವ್ಯಾಪಾರಿಗಳು ಹಾಗೂ ಯುವ ಉದ್ಯಮಿಗಳಿಗೆ ಮುದ್ರಾ ಯೋಜನೆ, ದೇಶವನ್ನು ಡಿಜಿಟಲ್ ವ್ಯವಸ್ಥೆಯತ್ತ ಕೊಂಡೊಯ್ಯಲು ಡಿಜಿಟಲ್ ಇಂಡಿಯಾ, ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯಕ್ಕಾಗಿ ಸ್ವಚ್ಛ ಭಾರತ್ ಅಭಿಯಾನ, ದೇಶೀಯ ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಗೆ ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.ಭಾರತವು ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ದಿಸೆಯಲ್ಲಿ ಅಭಿವೃದ್ಧಿ, ಮೂಲಸೌಕರ್ಯ, ತಂತ್ರಜ್ಞಾನ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳ ಮೂಲಕ ಹೊಸ ಹೆಜ್ಜೆ ಇಡುತ್ತಿದೆ. ಪ್ರಧಾನಿ ಮೋದಿ ಅವರಿಗೆ ಭಗವಂತ ಇನ್ನಷ್ಟು ಆರೋಗ್ಯ, ಆಯುಷ್ಯ ಹಾಗೂ ದೇಶಸೇವೆಯ ಶಕ್ತಿ ನೀಡಲಿ. ಭಾರತ ಇನ್ನಷ್ಟು ಅಭಿವೃದ್ಧಿ ಹೊಂದಿ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಹಿರಿಯ ಮುಖಂಡರಾದ ಬ್ಯಾಕರವಳ್ಳಿ ಜಯಣ್ಣ, ಬಾಗೆ ಜಯಪ್ರಕಾಶ್, ರಾಮಚಂದ್ರು, ಶಶಿಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಗ್ನಿ ಸೋಮಶೇಖರ್, ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಬಬಿತಾ ವಿಶ್ವನಾಥ್, ಪಕ್ಷದ ಮುಖಂಡರಾದ ರಾಜಕುಮಾರ್, ವನಜಾಕ್ಷಿ, ಚೇತನ, ಗಣೇಶ್ ಬಾಬು, ಪರಮೇಶ್, ಭಾಸ್ಕರ್, ಮದನ್, ವಿನಯ್, ಹರೀಶ್ ಆಚಾರ್, ಮೋಹನ್, ಸತ್ಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.