ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನಲ್ಲಿ 9 ಪಂಚಾಯ್ತಿಗಳಲ್ಲಿನ ನೀರಿನ ಸಮಸ್ಯೆ ಉಲ್ಭಣವಾಗಿರುವ ವಿಚಾರವನ್ನು ಶಾಸಕ ಎಂ.ಆರ್‌. ಮಂಜುನಾಥ್‌ ಅವರು ಸದನದಲ್ಲಿ ಪ್ರಸ್ತಾಪಿಸಿದರು.

ಹನೂರು ಕ್ಷೇತ್ರದ ಶಾಸಕ ಮಂಜುನಾಥ್ ಮಂಗಳವಾರ ಸದನದಲ್ಲಿ ಭಾಗವಹಿಸಿ ಮಾತನಾಡಿದರು. ಹನೂರು ತಾಲೂಕಿನಲ್ಲಿ ಮಳೆಯ ಅಭಾವದಿಂದ ನೀರಿನ ಸಮಸ್ಯೆ ಉಂಟಾಗಿದ್ದು, ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೌಲಭ್ಯಗಳನ್ನು ಕಲ್ಪಿಸಿ ಎಂದರು.

ಹನೂರು ತಾಲೂಕು ಭೂಗೋಳಿಕವಾಗಿ ವಿಸ್ತಾರವಾಗಿರುವ ದೊಡ್ಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಾಗಿದ್ದು, ಇಲ್ಲಿನ 9ರಿಂದ 10 ಗ್ರಾಮ ಪಂಚಾಯ್ತಿಗಳು ಅರಣ್ಯದಂಚಿನ ಒಳಭಾಗಗಳಲ್ಲಿ ಇರುವುದರಿಂದ ಕೇಂದ್ರ ಸರ್ಕಾರದ ಜಲಜೀವನ ಮಿಷನ್ ನೀರಾವರಿ ಯೋಜನೆ ಕಳೆದ 3 ವರ್ಷಗಳಿಂದ ಅರಣ್ಯ ಇಲಾಖೆ ಅನುಮೋದನೆ ನೀಡದೆ ಕಾಮಗಾರಿ ವಿಳಂಬ ಆಗಿದೆ. ಕೇಂದ್ರ ಸರ್ಕಾರ ಇನ್ನು ಅನುಮೋದನೆ ನೀಡದೆ ಇರುವುದರಿಂದ ನೀರಾವರಿ ಯೋಜನೆಗಳಿಗೆ ಹಿನ್ನಡೆಯಾಗಿದೆ ಎಂದರು.

ಮಳೆಯ ಅಭಾವ ಕುಡಿಯುವ ನೀರಿನ ಸಮಸ್ಯೆ:


ಕಳೆದ 3 ವರ್ಷಗಳಿಂದ ಮಳೆಯ ಕೊರತೆಯಿಂದ ಅಂತರ್ಜಲ ಕುಸಿತದಿಂದ ಗ್ರಾಮ ಪಂ.ಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ತಲೆದೂರಿದೆ. ಹಲವಾರು ಕೊಳವೆಬಾವಿಗಳನ್ನು ಕೊರೆಸಿದರು ಸಮರ್ಪಕ ನೀರು ಬರುತ್ತಿಲ್ಲ. ಸಮಸ್ಯೆ ಗ್ರಾಮಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ ಎಂದರು.

ಹೀಗಾಗಿ ರಾಮಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಡುತೊರೆ ಜಲಾಶಯ ನೀರಾವರಿ ಯೋಜನೆಗೆ ಸರ್ಕಾರ ₹490 ಕೋಟಿ ಅನುದಾನ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಶಾಸಕರು ಅಭಿನಂದನೆ ಸಲ್ಲಿಸಿದರು. ಇದಕ್ಕೆ ಪೂರಕವಾಗಿ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ನೀರಾವರಿ ಯೋಜನೆಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಮಾತ್ರ ಅನುಕೂಲವಾಗಿದೆ ಎಂದರು.ಅನುದಾನಕ್ಕೆ ಮನವಿ:

ತಾಲೂಕಿನ ಉಳಿದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಸಂಗ್ರಹಿಸಲು ಸಣ್ಣ ನೀರಾವರಿ ಇಲಾಖೆ ವತಿಯಿಂದ ಚೆಕ್‌ ಡ್ಯಾಮ್‌ಗಳನ್ನು ನಿರ್ಮಾಣ ಮಾಡಿ ನೀರಿನ ಸಂಗ್ರಹಕ್ಕೆ ಒತ್ತು ನೀಡಬೇಕು ಎಂದರು.ಸಣ್ಣ ನೀರಾವರಿ ಸಚಿವ ಡಾ.ಎಂ.ಸಿ. ಸುಧಾಕರ್‌ ಮಾತನಾಡಿ, ಶಾಸಕ ಮಂಜುನಾಥ್ ಒಂದು ಹೋಬಳಿಗೆ ಸೀಮಿತವಾಗಿ ಗಮನ ಸೆಳೆದಿದ್ದಾರೆ. ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ 4 ವರ್ಷಗಳಲ್ಲಿ 9 ಕೋಟಿಗೂ ಹೆಚ್ಚು ಅನುದಾನ ನೀರಾವರಿ ಸಮಸ್ಯೆಗೆ ನೀಡಲಾಗಿದೆ. ಸರ್ಕಾರ ಸಹ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ₹490 ಕೋಟಿ ಅನುದಾನ ನೀಡಿ ಕುಡಿಯುವ ನೀರಿನ ಸಮಸ್ಯೆ ಹಾಗೂ 12,000 ಎಕರೆ ನೀರಾವರಿಗೆ ಹಣವನ್ನು ಮೀಸಲಿಟ್ಟಿದ್ದಾರೆ. ಸಣ್ಣ ನೀರಾವರಿ ಇಲಾಖೆ ವತಿಯಿಂದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.