ನರೇಗಾ ಬಚಾವೋ ಸಂಗ್ರಾಮದ ಅಂಗವಾಗಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಮಂಗಳವಾರ ಕೂಲಿ ಕಾರ್ಮಿಕರೊಂದಿಗೆ ಚಿಗಟೇರಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು

ಹರಪನಹಳ್ಳಿ: ನರೇಗಾ ಬಚಾವೋ ಸಂಗ್ರಾಮದ ಅಂಗವಾಗಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಮಂಗಳವಾರ ಕೂಲಿ ಕಾರ್ಮಿಕರೊಂದಿಗೆ ಚಿಗಟೇರಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಕೆಸರಹಳ್ಳಿ, ಬಸವನಾಳು, ಗೌರಿಪುರ, ಹಗರಿಗಜಾಪುರ, ಬಳಿಗಾನೂರು, ಮೈದೂರು ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಿಸುವ ಮೂಲಕ ಅದರ ಮೂಲ ತತ್ವವನ್ನೇ ಕೇಂದ್ರ ಸರ್ಕಾರ ಹಾಳು ಮಾಡಿದೆ. ಗಾಂಧೀಜಿ ಒಬ್ಬ ವ್ಯಕ್ತಿ ಮಾತ್ರ ಅಲ್ಲ, ಅವರು ಒಂದು ಯುಗ, ಒಂದು ದರ್ಶನ, ಒಂದು ಮೌಲ್ಯದ ವ್ಯವಸ್ಥೆ ಎಂದು ಹೇಳಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ಎಂಬುದು ಕೇವಲ ಒಂದು ಯೋಜನೆ ಅಲ್ಲ. ಅದು ಗ್ರಾಮೀಣ ಭಾರತದ ಬಡ ಕುಟುಂಬಗಳಿಗೆ ಜೀವನಾಧಾರ ನೀಡಿದ ಜೀವನಾಡಿ. ಅದು ಕೇವಲ ಉದ್ಯೋಗದ ಭರವಸೆ ನೀಡಲಿಲ್ಲ, ಬದುಕಿಗೆ ಗೌರವವನ್ನೂ ನೀಡಿತು. ಕೆಲಸ ಕೇಳುವ ಹಕ್ಕು ಎಂಬ ಸಂವಿಧಾನಾತ್ಮಕ ಮನೋಭಾವವನ್ನು ಗ್ರಾಮೀಣ ಜನತೆಗೆ ನೀಡಿದ ಮಹತ್ವದ ಕಾಯ್ದೆ ಅದು. ಇಂತಹ ಮಹತ್ವದ ಯೋಜನೆ ಹೆಸರು ಬದಲಿಸುವ ಮೂಲಕ ಕೇಂದ್ರ ಸರ್ಕಾರ ಅದರ ಆತ್ಮವನ್ನೇ ಬದಲಿಸಲು ಯತ್ನಿಸುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಈ ಯೋಜನೆಯ ಹೆಸರನ್ನು ಬದಲಿಸಿ ಜಿ ರಾಮ್ ಜಿ ಎಂದು ಮರುನಾಮಕರಣ ಮಾಡಿದೆ. ಇದು ಕೇವಲ ಹೆಸರಿನ ಬದಲಾವಣೆ ಅಲ್ಲ, ಇದು ಒಂದು ಚಿಂತನೆಗೆ, ಒಂದು ತತ್ವಕ್ಕೆ, ಒಂದು ಮಹಾನ್ ನಾಯಕನ ಸ್ಮರಣೆಗೆ ನೀಡುತ್ತಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನರೇಗಾ ಕೇವಲ ಉದ್ಯೋಗ ಯೋಜನೆ ಅಲ್ಲ, ಅದು ಗ್ರಾಮೀಣ ಆರ್ಥಿಕತೆಯ ಚಕ್ರವನ್ನು ತಿರುಗಿಸುವ ಯಂತ್ರ.

ನಾವು ಯಾರ ವಿರುದ್ಧ ಹೋರಾಟ ಮಾಡುತ್ತಿಲ್ಲ, ನಾವು ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಗಾಂಧೀಜಿ ಹೆಸರನ್ನು ಅಳಿಸುವವರ ವಿರುದ್ಧ ಧ್ವನಿ ಎತ್ತಿದ್ದೇವೆ. ಈ ಪಾದಯಾತ್ರೆ ಒಂದು ಜಾಗೃತಿ ಮತ್ತು ಎಚ್ಚರಿಕೆಯಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮೂಲ ಹೆಸರನ್ನು ಉಳಿಸಬೇಕು. 100 ದಿನಗಳ ಉದ್ಯೋಗ ಭರವಸೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕೂಲಿ ಪಾವತಿಗಳನ್ನು ಸಮಯಕ್ಕೆ ಮಾಡಬೇಕು. ಕಾರ್ಮಿಕರ ಹಕ್ಕುಗಳನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಕೆ.ಕುಬೇರಗೌಡ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಜಯಲಕ್ಷ್ಮೀ, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣನಾಯ್ಕ, ದೇವೇಂದ್ರಗೌಡ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಉದಯಶಂಕರ್, ಉಮಾ ಶಂಕರ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಲಾಟಿದಾದಪೀರ್, ಮುಖಂಡರಾದ ಮೈದೂರು ರಾಮಪ್ಪ, ಕಡಬಗೆರೆ ಮಲ್ಲಿಕಾರ್ಜುನ, ಎಸ್. ಜಾಕೀರಹುಸೇನ್, ಮತ್ತಿಹಳ್ಳಿ ರಾಮಪ್ಪ, ಬಿ.ಪಿ. ಬಸವರಾಜ್, ನರೇಶಪ್ಪ, ಕೆಂಚಪ್ಪ, ಕವಿತಾ ಸುರೇಶ್, ಗುಡಿನಾಗರಾಜ್, ನಂದಿಬೇವೂರು ಅಶೋಕ್, ಮತ್ತೂರು ಬಸವರಾಜ್, ಪ್ರಸಾದ್ ಕವಾಡಿ ಮತ್ತಿತರರು ಉಪಸ್ಥಿತರಿದ್ದರು‌.