ಸಾರಾಂಶ
ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆಯ ರೈಲ್ವೆ ಕೆಳ ಸೇತುವೆ ಬಳಿಯ ರಸ್ತೆ ಅಭಿವೃದ್ಧಿಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.
ವಾರ್ಡ್ ಸಂಖ್ಯೆ 19ರ ಸತ್ಯನಾರಾಯಣ ಪೇಟೆಯ ಕೂಲ್ ಕಾರ್ನರ್ ವೃತ್ತದಿಂದ ಇಂದಿರಾ ವೃತ್ತದವರೆಗೆ ರಸ್ತೆಯ ಎರಡೂ ಬದಿ ಪೇವರ್ ಅಳವಡಿಕೆ ಮತ್ತು ಸುಂದರೀಕರಣ ಹಾಗೂ ಸತ್ಯನಾರಾಯಣ ಪೇಟೆಯ ರೈಲ್ವೆ ಕೆಳ ಸೇತುವೆಯ ಅಭಿವೃದ್ಧಿ, ಸುಂದರೀಕರಣ ಕಾಮಗಾರಿ ಹಾಗೂ ವಾರ್ಡ್ ಸಂಖ್ಯೆ 21ರ ವ್ಯಾಪ್ತಿಯ ಚೈತನ್ಯ ಕಾಲೇಜು ಹಿಂಭಾಗದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿ ಪೂಜೆಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ನಗರದ ಎಲ್ಲ ರಸ್ತೆಗಳ ಅಭಿವೃದ್ಧಿ ಹಾಗೂ ವೃತ್ತಗಳ ಅಭಿವೃದ್ಧಿ ಮತ್ತು ಸುಂದರೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಬಳ್ಳಾರಿಯ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ಈಗಾಗಲೇ ಹಲವು ಕಾರ್ಯಯೋಜನೆ ರೂಪಿಸಿಕೊಳ್ಳಲಾಗಿದೆ. ಜನರ ನಿರೀಕ್ಷೆಯಂತೆಯೇ ಪ್ರಗತಿದಾಯಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.ಪಾಲಿಕೆಯ ಸದಸ್ಯೆ ಎಂ.ರಾಜೇಶ್ವರಿ, ಎಇಇ ಬಸವರೆಡ್ಡಿ, ಕಾಂಗ್ರೆಸ್ ಮುಖಂಡರಾದ ಪರಶುರಾಮ್, ಚಾನಾಳ್ ಶೇಖರ್, ಸುಬ್ಬರಾಯುಡು, ತಲಪುರಿ ಪದ್ಮಾ, ರಾಜು, ರಘು, ವಿಜಯ ಮತ್ತಿತರರಿದ್ದರು.
ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಸರ್ಕಾರದ ಮೈಲುಗಲ್ಲು:ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾರಥ್ಯದ ನಮ್ಮ ರಾಜ್ಯದ ಘನ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿ ಆಧಾರಿತ ಶೈಕ್ಷಣಿಕ-ಆರ್ಥಿಕ-ಸಾಮಾಜಿಕ ಸಮೀಕ್ಷೆ ನಮ್ಮ ಸರ್ಕಾರದ ಸಾಧನೆಗಳಲ್ಲಿಯೇ ಪ್ರಮುಖ ಮೈಲುಗಲ್ಲು ಆಗಲಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.
ಬಳ್ಳಾರಿ ನಗರದ ನೆಹರು ಕಾಲನಿಯಲ್ಲಿ ತಮ್ಮ ನಿವಾಸದಲ್ಲಿ ಜರುಗಿದ ಸಮೀಕ್ಷಾ ಕಾರ್ಯದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆಯಿಂದ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರನ್ನು ಗುರುತಿಸುವ ಮೂಲಕ ಹಿಂದುಳಿದ ಸಮುದಾಯಗಳನ್ನು ಮುನ್ನೆಲೆಗೆ ತರಲು ಸಾಧ್ಯವಾಗಲಿದೆ. ಹಿಂದುಳಿದ ಸಮುದಾಯಗಳಿಗಾಗಿ ಕೈಗೆತ್ತಿಕೊಂಡಿರುವ ಅನೇಕ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗಲಿದೆ. ಸಮೀಕ್ಷೆದಾರರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ, ಸಮೀಕ್ಷಾ ಮಾಹಿತಿಯ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದೇನೆ. ಈ ಮೂಲಕ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಈವರೆಗೆ ನಡೆದ ಈ ಸಮೀಕ್ಷೆಯಲ್ಲಿ ಬಹುತೇಕ ಎಲ್ಲ ಸಾರ್ವಜನಿಕರೂ ಭಾಗವಹಿಸಿದ್ದು, ಇದು ನಮ್ಮ ಸರ್ಕಾರದ ಹಲವು ಸಾಧನೆಗಳಲ್ಲಿ ಪ್ರಮುಖ ಮೈಲುಗಲ್ಲಾಗಲಿದೆ. ಈ ಸಮೀಕ್ಷೆಯಿಂದ ಲಭ್ಯವಾಗುವ ದತ್ತಾಂಶವು ರಾಜ್ಯ ಸರ್ಕಾರಕ್ಕೆ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.