ಬೇಲೂರು ಬಸ್‌ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಶಾಸಕ ಕಿಡಿ

| Published : Jan 05 2025, 01:31 AM IST

ಬೇಲೂರು ಬಸ್‌ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಶಾಸಕ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣವಾಗಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಎಚ್. ಕೆ. ಸುರೇಶ್ ಭೇಟಿ ನೀಡಿ ಡಿಪೋ ವ್ಯವಸ್ಥಾಪಕರನ್ನು ತರಾಟೆ ತೆಗೆದುಕೊಂಡರು. ಇಷ್ಟೆಲ್ಲಾ ಅವ್ಯವಸ್ಥೆಗೆ ಕಾರಣವಾಗಿರುವ ಅಧಿಕಾರಿಗಳ ತಲೆದಂಡ ಮಾಡಲು ಹಾಗೂ ಸಾರ್ವಜನಿಕರ ಜೊತೆ ಸ್ಪಂದಿಸದ ಡಿಪೋ ಮ್ಯಾನೇಜರ್ ಅವರನ್ನು ಕೂಡಲೇ ವರ್ಗಾವಣೆಗೊಳಿಸುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣವಾಗಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಎಚ್. ಕೆ. ಸುರೇಶ್ ಭೇಟಿ ನೀಡಿ ಡಿಪೋ ವ್ಯವಸ್ಥಾಪಕರನ್ನು ತರಾಟೆ ತೆಗೆದುಕೊಂಡರು.

ಇತ್ತೀಚಿನ ದಿನಗಳಲ್ಲಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯಿಲ್ಲದಿರುವುದು, ಶೌಚಾಲಯ ಅವ್ಯವಸ್ಥೆ ಇಲ್ಲದಿರುವುದು ಹಾಗೂ ಸರಿಯಾದ ಸಮಯಕ್ಕೆ ಬಸ್‌ಗಳ ವ್ಯವಸ್ಥೆ ಮಾಡದೆ ಇರುವ ಬಗ್ಗೆ ವರದಿಗಳು ಬಂದ ಹಿನ್ನೆಲೆ ಶನಿವಾರ ದಿಢೀರ್ ಭೇಟಿ ನೀಡಿದ ಶಾಸಕರು, ಅಲ್ಲಿಯ ಅವ್ಯವಸ್ಥೆ ಕಂಡು ಕಿಡಿಕಾರಿದರಲ್ಲದೆ ಇಷ್ಟೆಲ್ಲಾ ಅವ್ಯವಸ್ಥೆಗೆ ಕಾರಣವಾಗಿರುವ ಅಧಿಕಾರಿಗಳ ತಲೆದಂಡ ಮಾಡಲು ಹಾಗೂ ಸಾರ್ವಜನಿಕರ ಜೊತೆ ಸ್ಪಂದಿಸದ ಡಿಪೋ ಮ್ಯಾನೇಜರ್ ಅವರನ್ನು ಕೂಡಲೇ ವರ್ಗಾವಣೆಗೊಳಿಸುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.

ಈ ವೇಳೆ ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಸ್ವತಃ ಪರಿಶೀಲಿಸಿ ಮಾತನಾಡಿ, ಬೇಲೂರು ವಿಶ್ವಪ್ರಸಿದ್ಧ ತಾಣವಾಗಿದೆ. ಆದರೆ ಇಲ್ಲಿಗೆ ಬಂದ ಪ್ರವಾಸಿಗರು ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಹಾಗೂ ಸಾರ್ವಜನಿಕರು ಪ್ರತಿನಿತ್ಯ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದಾಗಿ ನಾವು ತಲೆತಗ್ಗಿಸುವ ಪರಿಸ್ಥಿತಿ ಉಂಟಾಗಿದೆ. ಸುಮಾರು ೧ ತಿಂಗಳಿಂದ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲ ಹಾಗೂ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕೂಡ ನೀಡುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಹಲವಾರು ಬಾರಿ ಡಿಪೋ ಮ್ಯಾನೇಜರ್ ಶಾಜೀಯಬಾನು ಅವರಿಗೆ ಮಾಹಿತಿ ನೀಡಿದ್ದರೂ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಶೌಚಾಲಯದಿಂದ ರೋಗ ಹರಡಿದರೆ ಇದಕ್ಕೆ ಯಾರು ಹೊಣೆ? ನಿಗದಿತ ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರಿಗೆ ತೊಂದರೆಯಾಗುತ್ತಿದೆ. ಇದಕ್ಕೆನೇರ ಹೊಣೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳೇ. ಇಷ್ಟೆಲ್ಲಾ ಲೋಪದೋಷಗಳಾಗಿದ್ದರೂ ನಮ್ಮ ಗಮನಕ್ಕೆ ತಂದಿಲ್ಲ. ಕೂಡಲೇ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು. ಸಮಸ್ಯೆಗಳನ್ನು ಬಗೆಹರಿಸದಿದ್ದರೆ ನಾನೇ ಸ್ಥಳೀಯರೊಂದಿಗೆ ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಸ್ ನಿಲ್ದಾಣದ ಡಿಪೋ ಮ್ಯಾನೇಜರ್ ಶಾಜೀಯಭಾನು ಮಾತನಾಡಿ, ನೀರಿನ ಸಮಸ್ಯೆ ಹಾಗೂ ಶೌಚಾಲಯದ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಈಗಾಗಲೇ ಎಂಜಿನಿಯರ್ ಸಹ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು, ಅತಿ ಶೀಘ್ರದಲ್ಲೇ ಅದನ್ನು ಬಗೆಹರಿಸಲಾಗುವುದು. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಶೌಚಾಲಯದ ಅವ್ಯವಸ್ಥೆ ಬಗ್ಗೆ ಗುತ್ತಿಗೆದಾರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುಚರಿ ಬಸ್‌ಗಳ ವ್ಯವಸ್ಥೆಗೆ ಪತ್ರ ಬರೆದಿದ್ದೇವೆ ಎಂದರು.

------------------------------------------------------