ಶಾಸಕ ಪಪ್ಪಿ ಇ.ಡಿ. ಕಸ್ಟಡಿ ಇಂದಿಗೆ ಅಂತ್ಯ, ಮತ್ತೆ ವಶಕ್ಕೆ?

| Published : Sep 08 2025, 01:00 AM IST

ಸಾರಾಂಶ

ಅಕ್ರಮ ಆನ್‌ಲೈನ್‌ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅಲಿಯಾಸ್‌ ಪಪ್ಪಿ ಅವರ ಜಾರಿ ನಿರ್ದೇಶನಾಲಯದ(ಇ.ಡಿ) ಕಸ್ಟಡಿ ಅವಧಿ ಸೋಮವಾರ ಅಂತ್ಯವಾಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ರಮ ಆನ್‌ಲೈನ್‌ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅಲಿಯಾಸ್‌ ಪಪ್ಪಿ ಅವರ ಜಾರಿ ನಿರ್ದೇಶನಾಲಯದ(ಇ.ಡಿ) ಕಸ್ಟಡಿ ಅವಧಿ ಸೋಮವಾರ ಅಂತ್ಯವಾಗಲಿದೆ.

16 ದಿನಗಳಿಂದ ಇ.ಡಿ ವಶದಲ್ಲಿರುವ ವೀರೇಂದ್ರ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ದಾಳಿ ವೇಳೆ ಜಪ್ತಿ ಮಾಡಲಾದ ಭಾರೀ ಪ್ರಮಾಣದ ಹಣ, ಚಿನ್ನಾಭರಣ, ಆಸ್ತಿ ದಾಖಲೆಗಳು, ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಟ್ಟಿಂಗ್‌ ವ್ಯವಹಾರ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಹೇಳಿಕೆ ದಾಖಲಿಸಿದ್ದಾರೆ.

ಕಸ್ಟಡಿ ಅವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯೊಳಗೆ ವೀರೇಂದ್ರರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ತನಿಖೆ ವೇಳೆ ಕೆದಕಿದಷ್ಟು ಅಕ್ರಮಗಳು ತೆರೆದುಕೊಳ್ಳುತ್ತಿರುವುದರಿಂದ ಆರೋಪಿ ಹೆಚ್ಚಿನ ವಿಚಾರಣೆ ಸಂಬಂಧ ಮತ್ತೆ ಕೆಲ ದಿನ ತಮ್ಮ ವಶಕ್ಕೆ ನೀಡುವಂತೆ ಇ.ಡಿ.ಅಧಿಕಾರಿಗಳು ಮನವಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ:

ಇ.ಡಿ. ಅಧಿಕಾರಿಗಳು ಆ.22ರಂದು ಕೆ.ಸಿ.ವೀರೇಂದ್ರ, ಆತನ ಸಹೋದರರು ಹಾಗೂ ಪಾಲುದಾರರ ಮನೆಗಳು ಹಾಗೂ ಕಚೇರಿಗಳು ಸೇರಿ ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು ನಗರ, ಹುಬ್ಬಳ್ಳಿ, ಜೋಧ್‌ಪುರ, ಮುಂಬೈ, ಗೋವಾ ಸೇರಿ ರಾಜ್ಯ ಹಾಗೂ ಹೊರರಾಜ್ಯಗಳ 31 ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಆ.23ರಂದು ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಕೆ.ಸಿ.ವೀರೇಂದ್ರನನ್ನು ಬಂಧಿಸಿದ್ದರು.

ಶೋಧ ಕಾರ್ಯ ವೇಳೆ ಸುಮಾರು 12 ಕೋಟಿ ರು. ನಗದು, ಸುಮಾರು 6 ಕೋಟಿ ರು. ಮೌಲ್ಯದ ಚಿನ್ನಾಭರಣ, 10 ಕೆ.ಜಿ. ಬೆಳ್ಳಿವಸ್ತುಗಳು, 1 ಕೋಟಿ ರು. ಮೌಲ್ಯದ ವಿದೇಶಿ ಕರೆನ್ಸಿ, ನಾಲ್ಕು ವಾಹನಗಳನ್ನು ಜಪ್ತಿ ಮಾಡಿದ್ದರು. ವೀರೇಂದ್ರ ಅವರ ಸಹೋದರ ಕೆ.ಸಿ.ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್‌.ರಾಜ್‌ ಅವರ ಬಳಿ ಕೋಟ್ಯಂತರ ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಅಂತೆಯೇ ವೀರೇಂದ್ರ ಅವರಿಗೆ ಸೇರಿದ 17 ಬ್ಯಾಂಕ್‌ ಖಾತೆಗಳು ಮತ್ತು 2 ಬ್ಯಾಂಕ್ ಲಾಕರ್‌ಗಳನ್ನು ಫ್ರೀಜ್‌ ಮಾಡಿದ್ದರು.

ಮತ್ತೆ ಸೆ.2ರಂದು ವೀರೇಂದ್ರ ಹಾಗೂ ಇತರರಿಗೆ ಸೇರಿದ ಬೆಂಗಳೂರು ಮತ್ತು ಚಳ್ಳಕೆರೆಯ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧಿಸಿದ್ದರು. ಈ ವೇಳೆ ವೀರೇಂದ್ರ ಅವರ 9 ಬ್ಯಾಂಕ್‌ ಖಾತೆಗಳಲ್ಲಿನ ಸುಮಾರು 40.69 ಕೋಟಿ ರು. ಮತ್ತು 262 ನಕಲಿ ಖಾತೆಗಳಲ್ಲಿನ 14.46 ಕೋಟಿ ರು. ಸೇರಿ ಒಟ್ಟು 55 ಕೋಟಿ ರು. ಸ್ಥಗಿತಗೊಳಿಸಿ ಐದು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದರು.