ಕನ್ನಡಪ್ರಭ ವಾರ್ತೆ ಬೇಲೂರು
ಯಗಚಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಎಚ್. ಕೆ. ಸುರೇಶ್ ಬಾಗಿನ ಅರ್ಪಿಸಿದರು.ಮಲೆನಾಡು ಭಾಗದಲ್ಲಿ ಬಿದ್ದ ಮಳೆಯಿಂದ ಯಗಚಿ ಭರ್ತಿಯಾಗಿದೆ. ಜಲಾಶಯದಲ್ಲಿ ೩.೧೬೩ ನೀರು ಶೇಖರಣೆಯಾಗಿದೆ. ಒಳಹರಿವು ಹೆಚ್ಚಾಗುವ ಭೀತಿಯಿಂದ ಈಗಾಗಲೇ ನದಿಪಾತ್ರದ ಜನರಿಗೆ ಮನ್ನಚ್ಚರಿಕೆಯನ್ನು ಯಗಚಿ ನೀರಾವರಿ ನಿಗಮ ನೀಡಲಾಗಿತ್ತು. ಸದ್ಯ ಸಾಂಕೇತಿಕವಾಗಿ ಶಾಸಕರಾದ ಎಚ್. ಕೆ. ಸುರೇಶ್ ಒಳಗೊಂಡ ಅಧಿಕಾರಿಗಳು ಮತ್ತು ವಿವಿಧ ಸಂಘಸಂಸ್ಥೆಯ ಮುಖಂಡರ ಸಮ್ಮುಖದಲ್ಲಿ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಲೆನಾಡು ಭಾಗದಲ್ಲಿನ ವ್ಯಾಪಕ ಮಳೆಯಿಂದ ಯಗಚಿ ಜಲಾಶಯ ಭರ್ತಿಯಾಗಿದ್ದು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಗಿದೆ. ಮುಂದಿನ ದಿನದಲ್ಲಿ ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಜಿಲ್ಲಾ ಮಂತ್ರಿಗಳು, ನೀರಾವರಿ ಮಂತ್ರಿಗಳ ಸಾರಥ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಬಾಗಿನ ಅರ್ಪಿಸಲಾಗುತ್ತದೆ. ಬಯಲುಸೀಮೆಗೆ ಈಗಾಗಲೇ ಎತ್ತಿನಹೊಳೆ ಕಾಲುವೆಯಿಂದ ನೀರು ಸೇರಿದೆ. ಯಗಚಿ ಏತ ನೀರಾವರಿ ಮೂಲಕ ನೀರನ್ನು ಹರಿಸುವ ಕಡೆ ಅಧಿಕಾರಿಗಳು ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ಸಿಪಿಐ ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಪಿಎಸ್‌ಐ ಶಿವಾನಂದ ಪಾಟೀಲ್, ಯಗಚಿ ನೀರಾವರಿ ನಿಗಮ ಕಾರ್ಯಪಾಲಕ ಎಂಜಿನಿಯರ್ ರಾಮಕೃಷ್ಣ, ಸಂದೀಪ್, ಕರವೇ ಅಧ್ಯಕ್ಷ ಚಂದ್ರಶೇಖರ್, ಡಾ, ರಾಜಕುಮಾರ್ ಸಂಘದ ಅಧ್ಯಕ್ಷ ತೀರ್ಥಂಕರ್, ಬಿಜೆಪಿ ಅಧ್ಯಕ್ಷ ಸಂಜುಕೌರಿ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.