ಚನ್ನರಾಯಪಟ್ಟಣ: ಗ್ರಾಮೀಣ ಪ್ರತಿಭೆಗಳು ಇಂದಿನ ಸಿನಿಮಾ ಕ್ಷೇತ್ರದ ಪ್ರಮುಖ ನಟರಾಗಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಆಂಜನೇಯ ಸ್ವಾಮಿ ದೇಗುಲದಲ್ಲಿ ಶಾರದ ಚೌಡೇನಹಳ್ಳಿ ಅವರು ನಿರ್ಮಿಸುತ್ತಿರುವ ಮಿನುಗು ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಕ್ಲಾಪ್ಸ್ ಮಾಡಿ ಶುಭ ಹಾರೈಸಿ ಮಾತನಾಡಿದರು. ಕೆಲವಾರು ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಪೌರಾಣಿಕ ನಾಟಕಗಳು ತುಂಬಾ ಪ್ರಸಿದ್ಧಿ ಹೊಂದಿದ್ದವು. ಒಬ್ಬರಿಗಿಂತ ಒಬ್ಬರು ಪಾತ್ರಧಾರಿಗಳು ಉತ್ತಮ ಎಂಬಂತೆ ಪ್ರದರ್ಶನ ನೀಡುತ್ತಿದ್ದು ಸೈ ಎನಿಸುವಂತೆ ಇರುತಿತ್ತು. ಅಂತಹ ಬಹುತೇಕ ಪ್ರತಿಭೆಗಳು ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿ ಯಶಸ್ಸು ಕಂಡಿರುವುದು ಶ್ಲಾಘನೀಯ ಸಂಗತಿ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು. ಅಭಿಮಾನಿಗಳ ದೇವರು ಎಂದೇ ಖ್ಯಾತಿ ಪಡೆದಿದ್ದ ಕನ್ನಡದ ನೆಚ್ಚಿನ ಮೇರು ನಟ ಡಾ. ರಾಜಕುಮಾರ್ ಅಣ್ಣನವರು, ದೊಡ್ಡಣ್ಣ, ಉಮಾಶ್ರೀ ಅಮ್ಮ, ಶೃತಿ ಹಾಗೂ ಬಹುತೇಕ ನಟರು ಗ್ರಾಮೀಣ ಭಾಗದಿಂದಲೇ ಬಂದವರು. ಇವರ ಸಾಧನೆ ಹಾಗೂ ಹೆಸರು ನೂರಾರು ಕಾಲ ಚಿರವಾಗಿ ಉಳಿಯಲಿದೆ ಎಂದರು.

ಸಂಗೀತ ನಿರ್ದೇಶಕ ವಿ.ಮನೋಹರ್‌ ಮಾತನಾಡಿ, ಶಾರದ ಚೌಡೇನಹಳ್ಳಿ ಅವರು ನಿರ್ಮಾಣ ಮಾಡುತ್ತಿರುವ ಮಿನುಗು ಚಿತ್ರಕ್ಕೆ ಬಿ.ಶಿವಾನಂದ ಅವರು ಕಥೆ ಹಾಗೂ ಸಂಭಾಷಣೆ ಬರೆದಿದ್ದು, ರಾಜೇಶ್ ಕೆಂಚನಹಳ್ಳಿ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿಸಿದರು. ಚಿತ್ರತಂಡವು ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿತು. ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಚಿತ್ರತಂಡಕ್ಕೆ ಆಶೀರ್ವದಿಸಿದರು. ಭೂಮಿ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ರಾಜ ಕುಮಾರ್, ಮಾಲತೇಶ್, ರುದ್ರೇಶ್, ಬಿ.ಬಿ.ಗೌಡ, ಅಣತಿ ಯೋಗೇಶ್ ಹಾಗೂ ಇತರರು ಇದ್ದರು.