ಹಾವೇರಿ ಜಿಲ್ಲೆ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ರಾಜಕೀಯವಾಗಿ ಬಹಳಷ್ಟು ಅನ್ಯಾಯವಾಗುತ್ತಿದ್ದು, ಮುಂಬರುವ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಜಿಲ್ಲೆಗೆ ಸ್ಥಳೀಯ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣಿಬೆನ್ನೂರು: ಹಾವೇರಿ ಜಿಲ್ಲೆ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ರಾಜಕೀಯವಾಗಿ ಬಹಳಷ್ಟು ಅನ್ಯಾಯವಾಗುತ್ತಿದ್ದು, ಮುಂಬರುವ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಜಿಲ್ಲೆಗೆ ಸ್ಥಳೀಯ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.ನಗರದ ವಿವಿಧ ಭಾಗಗಳಲ್ಲಿ ಶುಕ್ರವಾರ ಅಂದಾಜು ₹ 4.39 ಕೋಟಿ ವೆಚ್ಚದ 45 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಿರಿಯರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಶ್ರೀನಿವಾಸ್ ಮಾನೆ ಶಾಸಕರಾಗಿದ್ದು, ಇವರಲ್ಲಿ ಓರ್ವರಿಗೆ ಮಂತ್ರಿ ಸ್ಥಾನ ನೀಡಬೇಕು. ಪ್ರಥಮ ಬಾರಿಗೆ ಶಾಸಕನಾದ ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ. ನಿಗಮ ಮಂಡಳಿ ಕೊಟ್ಟರೆ ಸ್ವೀಕರಿಸುವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಉತ್ತಮ ಕಾರ್ಯ ಮಾಡುತ್ತಿದೆ. ಈಗಾಗಲೇ 9 ಬಾರಿ ಶಾಸಕಾಂಗ ಸಭೆ ನಡೆದಿದ್ದು, ಇದರಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಕೇವಲ ಉಹಾಪೋಹವಾಗಿದೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ನಗರಸಭಾ ಮಾಜಿ ಸದಸ್ಯರುಗಳಾದ ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡ್ರ, ಸುಮಂಗಲಾ ಪಾಟೀಲ, ಬಸವರಾಜ ಹುಚಗೊಂಡರ, ಸೋಮನಾಥ ಹಿರೇಮಠ, ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ, ರಾಜಶೇಖರ ಸುರಳಿಕೇರಿಮಠ, ಚಂದ್ರಣ್ಣ ರಾಮಾಳದ, ಮೋಹನ ಖಾನಾಪುರ, ಎಸ್.ಬಿ. ಮರಿಗೌಡ್ರ, ಬಸವರಾಜ ಪಟ್ಟಣಶೆಟ್ಟಿ, ಹಾಲಸಿದ್ಧೇಶ್ವರಸ್ವಾಮಿ, ನಿರ್ಮಲಾ ನಾಯಕ ಸೇರಿದಂತೆ ಮತ್ತಿತರರಿದ್ದರು.