ಚಳ್ಳಕೆರೆ: ಕಳೆದ ಸುಮಾರು ೬೦ ವರ್ಷಗಳ ನಂತರ ನಗರದ ನಾಯಕನಹಟ್ಟಿ ರಸ್ತೆಯ ಕರೇಕಲ್ ಕೆರೆ ತುಂಬಿದ್ದು, ಏರಿಯಲ್ಲಿ ಕಾಣಿಸಿಕೊಂಡ ರಂಧ್ರಗಳಿಂದ ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ ಕೋಡಿಪ್ರದೇಶವನ್ನು ಮೂರು ಅಡಿ ಅಗೆದು ಕೆರೆ ನೀರನ್ನು ಹೊರಬಿಟ್ಟಿದ್ದು, ಪ್ರಸ್ತುತ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಲು ಶಾಸಕ ಟಿ.ರಘುಮೂರ್ತಿ ಅವರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಾರಂಭದಲ್ಲಿ ಎರಡು ರಂಧ್ರ ಕಾಣಿಸಿಕೊಂಡ ಸ್ಥಳವನ್ನು ವೀಕ್ಷಿಸಿದ ಶಾಸಕರು, ರಂಧ್ರದ ಮೂಲಕ ನೀರು ಹರಿಯುವುದನ್ನು ತಡೆಯುವಂತೆ ಸಣ್ಣನೀರಾವರಿ ಇಲಾಖೆ ಇಂಜಿನಿಯರ್ ಅಣ್ಣಪ್ಪನವರಿಗೆ ಸೂಚಿಸಿದರು.

ಈ ವೇಳೆ ಮಾಹಿತಿ ನೀಡಿದ ಅಣ್ಣಪ್ಪ, ಎರಡೂ ರಂಧ್ರಗಳನ್ನು ಏಕಕಾಲದಲ್ಲಿ ಮುಚ್ಚಲು ಸಾಧ್ಯವಾಗದು. ಹಾಗಾಗಿ ಒಳಭಾಗದಿಂದ ರಂಧ್ರವನ್ನು ಮುಚ್ಚಿಸುವ ಭರವಸೆ ನೀಡಿದರು.

ನಂತರ ಕೋಡಿ ಹರಿಯುವ ಜಾಗವನ್ನು ಪರಿಶೀಲಿಸಿ ಮಾತನಾಡಿದ ಶಾಸಕರು, ಸಕಾಲದಲ್ಲಿ ಅಧಿಕಾರಿಗಳು ತುರ್ತುಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕೆರೆ ಏರಿಗೆ ಯಾವುದೇ ಅಪಾಯವಾಗಿಲ್ಲ. ಆದರೂ ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಪರಿಸ್ಥಿತಿ ಎದುರಾಗಬಾರದು. ಆದ್ದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. ಸಣ್ಣ ನೀರಾವರಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಇಂಜಿನಿಯರನ್ನು ಸಂಪರ್ಕಿಸಿ ಕೋಡಿನೀರು ಹರಿಯುವ ಜಾಗದಲ್ಲಿ ವಿಸ್ತಾರವಾದ ಡೆಕ್ ನಿರ್ಮಿಸುವಂತೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಡೆಕ್ ನಿರ್ಮಾಣದ ಬಗ್ಗೆ ಯೋಜನೆ ಸಿದ್ಧಪಡಿಸಿ ಮಂಜೂರಾತಿಗೆ ಕಳಿಸುವಂತೆ ತಿಳಿಸಿದರು.

ತಹಸೀಲ್ದಾರ್ ರೇಹಾನ್‌ಪಾಷ ಮಾಹಿತಿ ನೀಡಿ, ಕೆರೆ ಏರಿಯಲ್ಲಿ ರಂಧ್ರಗಳಿಂದ ಅಪಾಯದ ಮುನ್ಸೂಚನೆಯ ಸುದ್ದಿತಿಳಿದ ಕೂಡಲೇ ಪೌರಾಯುಕ್ತ ಜಗರೆಡ್ಡಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕೋಡಿಯನ್ನು ಒಡೆದು ಹಾಕಿ ಹೆಚ್ಚುವರಿ ನೀರು ಹೊರಬಿಡಲಾಗಿದೆ. ಸದ್ಯದ ಸ್ಥಿತಿಯಲ್ಲಿ ಯಾವುದೇ ಅಪಾಯ ಉಂಟಾಗದು. ಆದರೂ ನಗರಸಭೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ್, ಡಿವೈಎಸ್ಪಿ ಟಿ.ಬಿ.ರಾಜಣ್ಣ, ಇನ್ಸ್‌ಪೆಕ್ಟರ್ ರಾಜಫಕೃದ್ದೀನ್ ದೇಸಾಯಿ, ನಗರಸಭೆ ಎಇಇ ಕೆ.ವಿನಯ್, ಇಂಜಿನಿಯರ್ ರವಿಕುಮಾರ್, ಚೇತನ್, ಮುಖಂಡರಾದ ಗುಜ್ಜಾರಪ್ಪ, ವೀರೇಶ್, ಅಂಜಿನಪ್ಪ, ಷಣ್ಮುಖಪ್ಪ ಮುಂತಾದವರು ಉಪಸ್ಥಿತರಿದ್ದರು.