ಸಹಕಾರಿ ಸಂಸ್ಥೆಗಳು ಲಾಭಗಳಿಸುವ ಗುರಿ ಜೊತೆಗೆ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಹಕಾರಿ ತತ್ವದ ಮೂಲಕ ಭವ್ಯ ಭಾರತದ ಕನಸು ನನಸಾಗಲು ಸಾಧ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶೃಂಗೇರಿ

ಸಹಕಾರಿ ಸಂಸ್ಥೆಗಳು ಲಾಭಗಳಿಸುವ ಗುರಿ ಜೊತೆಗೆ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಹಕಾರಿ ತತ್ವದ ಮೂಲಕ ಭವ್ಯ ಭಾರತದ ಕನಸು ನನಸಾಗಲು ಸಾಧ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಅವರು ತಾಲೂಕಿನ ಕೂತಗೋಡು ಪಂಚಾಯಿತಿ ಬೆಟಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಹಕಾರ ತತ್ವದಲ್ಲಿ ಬಲವಾದ ನಂಬಿಕೆ ಹಾಗೂ ಬದ್ಧತೆ ಹೊಂದಿದ್ದರು. ಅಧಿಕಾರ ಎಂದಿಗೂ ಶಾಶ್ವತವಲ್ಲ. ಸಂಸ್ಥೆಯ ಏಳಿಗೆಗೆ ಶ್ರಮಿಸಬೇಕು. ಒಂದು ಸಂಸ್ಥೆ ಏಳಿಗೆಯಾಗಬೇಕಾದರೆ ಅದರಲ್ಲಿರುವ ಸದಸ್ಯರ ಪಾತ್ರ ಮಹತ್ತರವಾಗಿದೆ ಎಂದ ಅವರು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆಯು ಅಭಿವೃದ್ಧಿಯ ಜೊತೆ ಮುನ್ನೆಡೆಯಬೇಕು ಎಂದು ತಿಳಿಸಿದರು.

ನೂತನ ಅಧ್ಯಕ್ಷ ಕೆ.ಎಂ.ರಮೇಶ್ ಭಟ್ ಅಧಿಕಾರ ಸ್ವೀಕರಿಸಿ ಮಾತನಾಡಿ, ಜಪಾನ್ ಸಣ್ಣ ರಾಷ್ಟ್ರವಾಗಿದ್ದರೂ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದೆ. 1939ರಲ್ಲಿ ಸಹಕಾರಿ ಕ್ಷೇತ್ರದಲ್ಲಿ 30 ತಿದ್ದುಪಡಿ ಮಾಡಲಾಗಿದೆ. ಪ್ರಸ್ತುತ ಸಂಘದಲ್ಲಿ 1336 ಷೇರುದಾರರಿದ್ದು, 12 ಕೋಟಿ ರು. ವ್ಯಾಪಾರ ವಹಿವಾಟು ನಡೆಯುತ್ತಿದೆ. 5 ಕೋಟಿ ಠೇವಣಿ ಇಡಲಾಗಿದೆ ಎಂದರು.

ಕೂತಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ.ನಾಗೇಶ್, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೆಚ್.ಕೆ.ದಿನೇಶ್ ಹೆಗ್ಡೆ, ಸತೀಶ್, ಶಾಮಣ್ಣ, ನಟರಾಜ್, ಮಮತಾ, ರವಿ, ಮೀನಾಕ್ಷಿ ಇತರರಿದ್ದರು.