ದಿನ ಬೆಳಗಾದ್ರೆ ಪ್ರಧಾನಿ ಬೈಯ್ಯುತ್ತಿದ್ದರೆ ಅನುದಾನ ಎಲ್ಲಿಂದ ಬರುತ್ತೆ

| Published : Dec 10 2024, 12:30 AM IST

ಸಾರಾಂಶ

ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನ ತರುವಲ್ಲಿ ದೇವೇಗೌಡರು, ಕುಮಾರಸ್ವಾಮಿ ಕಿಂಚಿತ್ತೂ ಪ್ರಯತ್ನ ಮಾಡಿಲ್ಲ ಎಂದು ಆರೋಪ ಮಾಡುವ ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೇಂದ್ರದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವ ಬದಲು ದಿನ ಬೆಳಗಾದರೆ ಪ್ರಧಾನಿಯನ್ನು ಬೈಯ್ಯುವುದರಲ್ಲೇ ಕಾಲಹರಣ ಮಾಡುತ್ತಿದೆ. ತನ್ನ ವೈಫಲ್ಯ ಇಟ್ಟುಕೊಂಡು ಮಾಜಿ ಪ್ರಧಾನಿಗಳಾಗಿ ದೇವೇಗೌಡರ ಸಾಕ್ಷಿಗುಡ್ಡೆ ಏನು ಎಂದು ಪ್ರಶ್ನಿಸುವ ಯಾವ ನೈತಿಕತೆ ಕಾಂಗ್ರೆಸಿಗಿದೆ ಎಂದು ಶಾಸಕ ರೇವಣ್ಣ ಪ್ರಶ್ನಿಸಿದರು.

ಹಾಸನ: ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನ ತರುವಲ್ಲಿ ದೇವೇಗೌಡರು, ಕುಮಾರಸ್ವಾಮಿ ಕಿಂಚಿತ್ತೂ ಪ್ರಯತ್ನ ಮಾಡಿಲ್ಲ ಎಂದು ಆರೋಪ ಮಾಡುವ ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೇಂದ್ರದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವ ಬದಲು ದಿನ ಬೆಳಗಾದರೆ ಪ್ರಧಾನಿಯನ್ನು ಬೈಯ್ಯುವುದರಲ್ಲೇ ಕಾಲಹರಣ ಮಾಡುತ್ತಿದೆ. ತನ್ನ ವೈಫಲ್ಯ ಇಟ್ಟುಕೊಂಡು ಮಾಜಿ ಪ್ರಧಾನಿಗಳಾಗಿ ದೇವೇಗೌಡರ ಸಾಕ್ಷಿಗುಡ್ಡೆ ಏನು ಎಂದು ಪ್ರಶ್ನಿಸುವ ಯಾವ ನೈತಿಕತೆ ಕಾಂಗ್ರೆಸಿಗಿದೆ ಎಂದು ಜೆಡಿಎಸ್‌ ನಾಯಕ ಶಾಸಕ ಎಚ್‌.ಡಿ. ರೇವಣ್ಣ ಪ್ರಶ್ನಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರ ೨೮ ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಯಾವ ಆಂದೋಲನ ಇದು. ಈಗ ರೈತರು ಸಂಕಷ್ಟದಲ್ಲಿದ್ದಾರೆ. ಈಗ ರೈತರ ಸಾಲ ಮನ್ನಾ ಮಾಡಲಿ. ಐದು ಗ್ಯಾರಂಟಿ ಕೊಟ್ಟಿದ್ದೀರಲ್ಲಾ... ಇನ್ನೊಂದು ಗ್ಯಾರಂಟಿ ಕೊಡಿ. ಹಾಸನದಲ್ಲಿ ಆರು ಜಿಲ್ಲೆ ಜನರನ್ನು ಕರೆತಂದು ಸಮಾವೇಶ ಮಾಡಿದ್ದಾರೆ. ಜಿಲ್ಲೆಗೆ ಇವರ ಕೊಡುಗೆ ಏನಿದೆ? ಸ್ವಾಭಿಮಾನಿ ಅಂತೆ, ಜನ ಕಲ್ಯಾಣ ಅಂತೆ. ದೇವೇಗೌಡರು ಪ್ರಧಾನಮಂತ್ರಿ ಇದ್ದಾಗ ಕೇಂದ್ರ ಸರ್ಕಾರದ ನಬಾರ್ಡ್‌ನಿಂದ ರೈತರಿಗೆ ಕಾರ್ಯಕ್ರಮ ರೂಪದಲ್ಲಿ ಸಾಲ ಕೊಡುವಂತೆ ಮಾಡಿದ್ದರು. ನಬಾರ್ಡ್ ಮೂಲಕ ರೈತರಿಗೆ ಲೋನ್ ಕೊಡುವುದು, ರಸ್ತೆಗೆ ಹಣ ಕೊಡುವುದು ಮಾಡಿದ್ದು ದೇವೇಗೌಡರು. ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕ್‌ಗೆ ೭೦ % ಹಣ ಕೊಡುತ್ತಿದ್ದರು. ಕೇಂದ್ರದಿಂದ ಸಿಗುವ ಸೌಲಭ್ಯವನ್ನು ರಾಜ್ಯಕ್ಕೆ ದೊರಕುವಂತೆ ಮಾಡಿದ್ದೇ ದೇವೇಗೌಡರು. ಕುಮಾರಸ್ವಾಮಿ ಸಾಲಮನ್ನಾ ಮಾಡದಿದ್ದರೆ ೨೧ ಬ್ಯಾಂಕ್‌ಗಳು ಮುಳುಗಿ ಹೋಗುತ್ತಿದ್ದವು. ದೇವೇಗೌಡರನ್ನ ಸಾಕ್ಷಿಗುಡ್ಡೆ ಕೇಳ್ತಾರೆ. ಅಪೆಕ್ಸ್ ಬ್ಯಾಂಕ್‌ಗೆ ೯೧೬೨ ಕೋಟಿ ಕೊಡಿ ಎಂದು ಕೇಂದ್ರ, ಆರ್‌ಬಿಐ, ನಬಾರ್ಡ್‌ಗೆ ದೇವೇಗೌಡರು ಪತ್ರ ಬರೆದಿದ್ದಾರೆ. ಕುಮಾರಸ್ವಾಮಿ ಹಾಸನ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ಗಳ ೫೩೧ ಕೋಟಿ ಸಾಲ ಮನ್ನ ಮಾಡಿದ್ದು, ೯೬೦೦ ಕೋಟಿ ರಾಷ್ಟ್ರೀಯ ಬ್ಯಾಂಕ್‌ಗಳ ಸಾಲಮನ್ನಾ ಆಗಿದೆ. ಕಾಂಗ್ರೆಸ್‌ನವರೇ ರೈತರ ಬಗ್ಗೆ ಮಾತನಾಡುತ್ತೀರಲ್ಲಾ ಮೊದಲು ರೈತರ ಸಾಲಮನ್ನಾ ಮಾಡಿ. ದೇವೇಗೌಡರ ರಾಜಕೀಯ ಮುಗಿದು ಹೋಯ್ತು ಅಂತ ಭಾಷಣ ಮಾಡ್ತಾರೆ. ಈ ಜಿಲ್ಲೆಗೆ ಕಾಂಗ್ರೆಸ್ ಪಕ್ಷ ಏನು ಕೊಡುಗೆ ಕೊಟ್ಟಿದೆ ಎಂಬುದನ್ನು ಹೇಳಲಿ. ಬ್ರಿಟೀಷರ ಕಾಲದಲ್ಲಿ ಆಗಿದ್ದ ರೈಲ್ವೆ ಮಾರ್ಗ ಕಿತ್ತುಕೊಂಡು ಹೋದವರು ಕಾಂಗ್ರೆಸ್‌ನವರು.ದೇವೇಗೌಡರು ಪ್ರಧಾನಮಂತ್ರಿಯಾಗಿ ಹತ್ತುವರೆ ತಿಂಗಳಿನಲ್ಲಿ ರೈಲ್ವೆ ಮಾರ್ಗ ಮಾಡಿದ್ರು. ಡಿಸಿಎಂ ಈ ಜಿಲ್ಲೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ರೈಲ್ವೆ ಮಾರ್ಗ, ಕೋರ್ಟ್, ಬಸ್ಟಾಂಡ್ ಕಟ್ಟಿದ್ದು ಯಾರು? ಇವೆಲ್ಲಾ ಸಾಕ್ಷಿ ಗುಡ್ಡೆಗಳಲ್ಲವಾ! ಗಿರಾಕಿಗಳೇ ಆಸ್ಪತ್ರೆ, ಎಂಜಿನಿಯರ್‌, ಮೆಡಿಕಲ್ ಕಾಲೇಜು, ಪಶುವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜುಗಳನ್ನು ನೋಡಿ ಎಂದರು. ಈ ಜಿಲ್ಲೆಯ ಜನ ದೇವೇಗೌಡರಿಗೆ, ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಅವರ ಋಣ ನಮ್ಮ ಮೇಲೆ ಇದೆ. ಅದನ್ನು ತೀರಿಸುತ್ತೇವೆ. ನನ್ನ ಕೈಲಾದ ಕೆಲಸವನ್ನು ಈ ಜಿಲ್ಲೆಗೆ ಮಾಡುತ್ತೇನೆ. ಇಂತಹ ಹತ್ತು ಸಮಾವೇಶ ಮಾಡಿದರೂ ನಾನೇನು ತಲೆ ಕೆಡಿಸಿಕೊಡಲ್ಲ. ಇವರಿಗೆ ತಾಕತ್ ಇದ್ದರೆ ಕಾಂಗ್ರೆಸ್ ಬಿಟ್ಟು ಬಂದು ನಮ್ಮ ರೀತಿ ಪಕ್ಷ ಕಟ್ಟಲಿ ಎಂದು ಸವಾಲು ಎಸೆದರು.

ಈಗ ಇರುವುದು ನಕಲಿ ಕಾಂಗ್ರೆಸ್‌:ಹಿಂದಿನ ಕಾಂಗ್ರೆಸ್ ಈಗ ಇಲ್ಲ. ಈಗ ಇರುವುದು ನಕಲಿ ಕಾಂಗ್ರೆಸ್. ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ ಅಂತಾರೆ, ಇವರು ಬಿ ಎಲ್ ಶಂಕರ್ ಕರೆದೊಯ್ದು ಏನು ಮಾಡಿದರು? ನಮ್ಮಿಂದ ವಲಸೆ ಹೋದವರು ಅಲ್ಲಿ ಇರುವವರು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿ ಜೇನುಕಲ್ಲು ಸಿದ್ದೇಶ್ವರನೇ ಇದಕ್ಕೆ ಸಾಕ್ಷಿ ಎಂದರು.

ಇವರನ್ನು ಮೂರು ಚುನಾವಣೆಯಲ್ಲಿ ಒಂದು ರುಪಾಯಿ ಖರ್ಚು ಮಾಡಿಸದೆ ಎಲೆಕ್ಷನ್ ಮಾಡಿ ಗೆಲ್ಲಿಸಿಕೊಂಡು ಬಂದಿದ್ದೇನೆ. ಇವರೆಲ್ಲ ಜೆಡಿಎಸ್ ಮುಗಿದುಹೋಯ್ತು ಅಂತಾರೆ. ೨೦೨೮ಕ್ಕೆ ಜೆಡಿಎಸ್ ಏನು ಎಂದು ಗೊತ್ತಾಗುತ್ತದೆ ಎಂದು ಪಕ್ಷ ಬಿಟ್ಟವರಿಗೆ ಬಿಸಿ ಮುಟ್ಟಿಸಿದರು. ಹಾಸನದಲ್ಲಿ ಯಾವಾಗ ಸಮಾವೇಶ ಮಾಡಬೇಕು ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ. ದೇವೇಗೌಡರು ಮೇಕೆದಾಟು ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಮಾತನಾಡಿದ್ದಾರೆ. ಹಾಸನದ ಔಟರ್ ರಿಂಗ್ ರೋಡ್‌ಗೆ ೭೫೦ ಕೋಟಿ ರು. ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ನಿರ್ದೇಶಕರಾದ ಹೊನ್ನವಳ್ಳಿ ಸತೀಶ್‌, ಜೆಡಿಎಸ್ ಮುಖಂಡರಾದ ಗಿರೀಶ್ ಚನ್ನವೀರಪ್ಪ, ಬಿದರಿಕೆರೆ ಜಯರಾಂ, ಜಗದೀಶ್, ನಾಗರಾಜು ಇತರರು ಇದ್ದರು.